ನೆಲ್ಯಾಡಿ:(ಎ.21) ಅಪ್ರಾಪ್ತೆಯ ಜೊತೆ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪದಲ್ಲಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ⭕Om Prakash: ಪತ್ನಿಯಿಂದಲೇ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ
16 ವರ್ಷದ ಅಪ್ರಾಪ್ತೆಯು ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಿ ಮನೆಯಲ್ಲಿದ್ದಳು. ದೂರದ ಸಂಬಂಧಿಕನೂ ಆದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ಮನೆಗೆ ಫೆ.10ರಂದು ಹೋಗಿದ್ದು ಆ ದಿನ ರಾತ್ರಿ ಊಟ ಮಾಡಿ ಮಲಗಿದ್ದ ಸಮಯ ಆರೋಪಿ ರಮೇಶನು ಅಪ್ರಾಪ್ತೆ ಮಲಗಿದ್ದಲ್ಲಿಗೆ ಬಂದು ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ.

ನಂತರ ಮಾ.9, ಮಾ.27, ಮಾ.28 ರಂದು ಅಪ್ರಾಪ್ತೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿರುತ್ತಾನೆ. ಮಾ.26 ರಂದು ಉಪ್ಪಿನಂಗಡಿ ಪೊಲೀಸರು, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಶಿಶು ಅಭಿವೃದ್ಧಿ ಇಲಾಖೆಯವರು ಅಪ್ರಾಪ್ತೆಯನ್ನು ಆಕೆಯ ಮನೆಯಿಂದ ಕರೆದುಕೊಂಡು ಬಂದು ಮಂಗಳೂರು ಕಾವೂರಿನಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಿದ್ದಾರೆ.

ಎ.1 ರಂದು ಬಾಲ ಮಂದಿರದ ಆಪ್ತ ಸಮಾಲೋಚಕರು ವಿಚಾರಣೆ ನಡೆಸಿದಾಗ ಅಪ್ರಾಪ್ತೆಯು ಆರೋಪಿ ರಮೇಶನು ಲೈಂಗಿಕ ಸಂಪರ್ಕ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಎ.2ರಂದು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅಪ್ರಾಪ್ತೆ ಗರ್ಭಿಣಿ ಎಂಬುದು ತಿಳಿದುಬಂದಿದೆ.


ನಂತರ ಅಪ್ರಾಪ್ತೆ ಬಾಲಕಿಯರ ಬಾಲಮಂದಿರದ ಸಿಬ್ಬಂದಿಯವರ ಜೊತೆಯಲ್ಲಿ ಬಾಲ ಮಂದಿರಕ್ಕೆ ಹೋಗಿದ್ದಾರೆ. ಘಟನೆ ಕುರಿತು ಅಪ್ರಾಪ್ತೆ ನೀಡಿದ ದೂರಿನಂತೆ ಆರೋಪಿ ರಮೇಶನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
