ಮಂಗಳೂರು :(28) ನಗರದ ಹೊರವಲಯದ ಕುಡುಪು ಬಳಿ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಭಾನುವಾರ ಸಂಜೆ ವೇಳೆಗೆ ಪತ್ತೆಯಾಗಿದೆ. ವ್ಯಕ್ತಿಯನ್ನು ಹಲ್ಲೆಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: 🔴ನೇಲ್ಯಡ್ಕ: 32ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ
ಇಲ್ಲಿನ ಸ್ಥಳೀಯರಿಗೆ ಮೃತ ವ್ಯಕ್ತಿಯ ಪರಿಚಯವಿಲ್ಲ. ಆತ ದಿನಗೂಲಿ ಕಾರ್ಮಿಕನಾಗಿರಬಹುದು ಎಂದು ಶಂಕಿಸಲಾಗಿದೆ. ಅಲ್ಲೇ ಸಮೀಪ ಕ್ರಿಕೆಟ್ ಪಂದ್ಯಾಟವೊಂದು ನಡೆದಿದ್ದು, ಅದನ್ನು ನೋಡಲು ಬಂದ ವ್ಯಕ್ತಿ ಕೊಲೆಯಾಗಿದ್ದಾನೆಯೇ ಎಂಬ ಅನುಮಾನವೂ ಇದೆ.

ಕುಡುಪು ಕಟ್ಟೆ ಸಮೀಪದ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಅಪರಿಚಿತ ಯುವಕನೊಬ್ಬ ತೆರಳಿದ್ದು, ಯಾವುದೋ ಕಾರಣಕ್ಕೆ ಈ ಯುವಕ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಯುವಕರ ತಂಡ ಈ ಯುವಕನಿಗೆ ಹಲ್ಲೆಗೈದಿದ್ದು, ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಘಟನಾ ಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್, ಮಂಗಳೂರು ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಕೂಲಿ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತಪಟ್ಟ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆತನ ಗುರುತು ಪತ್ತೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಥಮಿಕ ವರದಿಯ ಬಳಿಕ ಸಾವಿಗೆ ಕಾರಣ ಏನು ಎಂದು ತಿಳಿಯಬಹುದಾಗಿದೆ. ಈ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಿರಿ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.
