ರಾಮನಗರ (ಮೇ.15): ರವಿವಾರ ರಂದು ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯ ವಿಕಲಚೇತನ ಬಾಲಕಿ ಖುಷಿ (14 ವರ್ಷ) ನಾಪತ್ತೆಯಾಗಿದ್ದರು. ಮರುದಿನ ಸೋಮವಾರ (ಮೇ.12) ರಂದು ಖುಷಿಯ ಶವ ಭದ್ರಾಪುರ ಗ್ರಾಮ ಸಮೀಪದ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿತ್ತು. ಖುಷಿ ಕುಟುಂಬಸ್ಥರು ಬಾಲಕಿಯನ್ನು ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನು, ಖುಷಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ಯಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೆಲ ಸಾಕ್ಷ್ಯಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಅಲ್ಲದೆ, ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಕಲಚೇತನ ಬಾಲಕಿ ಖುಷಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಘಟನೆಯನ್ನು ಖಂಡಿಸಿ ರಾಮನಗರದಲ್ಲಿ ಭದ್ರಾಪುರ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿ ಆರೋಪಿಗಳನ್ನ ಶೀಘ್ರ ಬಂಧಿಸಿ ಗಲ್ಲಿಗೇರಿಸುವಂತೆ ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ ಗ್ರಾಮಕ್ಕೆ ಹಾಗೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಸರ್ಕಾರದಿಂದ ನ್ಯಾಯಕೊಡಿಸುವ ಭರವಸೆ ನೀಡಿದರು.ಈ ವಿಚಾರ ತಿಳಿದ ಬುಧವಾರ (ಮೇ.14) ಗ್ರಾಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ ಮಾಡಿ, ಸೂಕ್ತ ತನಿಖೆ ನಡೆಸಿ ಬಾಲಕಿಯ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಪ್ರಕರಣ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾಪತ್ತೆಯಾಗಿದ್ದ ಬಾಲಕಿ ರೈಲು ಹಳಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕೊಲೆ ಕೇಸ್ ಸಾಕಷ್ಟು ಅನುಮಾನಸ್ಪದವಾಗಿದೆ. ನಾನು ಕುಟುಂಬಸ್ಥರ ಬಳಿ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಎಲ್ಲ ಆಯಾಮಗಳಲ್ಲೂ ತನಿಖೆ ಆಗುತ್ತಿದೆ ಎಂದರು.ಕೆಲ ಸಾಕ್ಷ್ಯಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ವಿಶೇಷಚೇತನ ಬಾಲಕಿ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಬಾಲಕಿ ತಾಯಿ ಮತ್ತು ಸಹೋದರಿ ಬಳಿ ಮಾತನಾಡಿದ್ದೇನೆ. ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮದು. ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಂತ್ಯಸಂಸ್ಕಾರಕ್ಕೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ಅತ್ಯಾಚಾರ ಆಗಿದೆಯಾ? ಇಲ್ಲವಾ? ಎಂಬುದು ಎಫ್ಎಸ್ಎಲ್ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು.



