ಕಾರ್ಕಳ:(ಜೂ.9) ಮಗುವಿನ ಹುಟ್ಟು ಹಬ್ಬದ ದಿನವೇ ತಂದೆ ಸಾವನ್ನಪ್ಪಿದ ದಾರುಣ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ನಡೆದಿದೆ.

ಕುಕ್ಕುಂದೂರು ಗ್ರಾಮದ ಪರಪು ನಿವಾಸಿ, ಆಟೋ ಚಾಲಕ, ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸಾಲ್ಯಾನ್ (36) ಮೃತ ದುರ್ದೈವಿ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಅವರು ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲು ಮನೆಯಿಂದ ಸ್ಕೂಟಿಯಲ್ಲಿ ಪೇಟೆಗೆ ಬಂದಿದ್ದರು. ನಂತರ ಅವರು 10.30ರ ವೇಳೆಗೆ ಮನೆಗೆ ವಾಪಸಾಗುತ್ತಿದ್ದಾಗ ಪರಪು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕೂಟಿ ಸಹಿತ ಹೊಳೆಗೆ ಬಿದ್ದಿದ್ದರು.

ರಾತ್ರಿಯಿಡೀ ಸುಬ್ರಹ್ಮಣ್ಯ ಅವರಿಗಾಗಿ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಊರಿನವರು ಹುಡುಕುವಾಗ ಸೇತುವೆಯಡಿ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


