Thu. Jul 3rd, 2025

ಕುದ್ಯಾಡಿ: ಸದ್ಧರ್ಮ ಯುವಕ ಮಂಡಲದ ಕ್ರಿಯಾಶೀಲತೆ ಶ್ಲಾಘನೀಯ: ರಕ್ಷಿತ್ ಶಿವರಾಮ್

ಕುದ್ಯಾಡಿ:(ಜು.3) ಗ್ರಾಮಗಳಲ್ಲಿ ಯುವಕರ ಸಂಘಗಳು ಮರೀಚಿಕೆಯಾಗುತ್ತಿರುವ ಕಾಲಘಟ್ಟದಲ್ಲಿ ಕುದ್ಯಾಡಿಯ ಸದ್ಧರ್ಮ ಯುವಕ ಮಂಡಲ ಕ್ರಿಯಾಶೀಲವಾಗಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಹೇಳಿದರು.

ಇದನ್ನೂ ಓದಿ: ⭕ಕಡಬ: ಕಡಬ ಬಸ್ ನಿಲ್ದಾಣ ಸಮಸ್ಯೆ

ಕುದ್ಯಾಡಿ ಗ್ರಾಮದ ಸದ್ಧರ್ಮ ಯುವಕ ಮಂಡಲ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಒಕ್ಕೂಟದ ಸಹಯೋಗದಲ್ಲಿ ನಡೆದ ನೂತನ ಸದ್ಧರ್ಮ ಸಭಾಭವನದ ಉದ್ಘಾಟನೆ ಹಾಗೂ 44ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದೆ ಯುವಕ ಸಂಘಗಳಿಗೆ ಸರಕಾರದಿಂದ ಜಾಗ ದೊರಕುತ್ತಿತ್ತು, ಯುವಕ ಸಂಘಗಳು ಕ್ರೀಡೆಗೆ ಪ್ರೋತ್ಸಾಹ ನೀಡುವುದು, ಸಾಂಕ್ರಾಮಿಕದ ಸಂದರ್ಭಗಳಲ್ಲಿ ನೆರವಾಗುವುದು ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗುತ್ತಿದ್ದವು. ಆದರೆ ಈಗ ಇದು ಕಡಿಮೆಯಾಗುತ್ತಿದೆ. ಯುವಕ ಸಂಘಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇಂಥದ್ದರ ಮಧ್ಯೆ ಸದ್ಧರ್ಮ ಯುವಕ ಮಂಡಲ ನಿರಂತರವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.

“ಯಾವ ಗ್ರಾಮವೂ ಕುಗ್ರಾಮವಲ್ಲ. ಸಂಘಟಿತ ಪ್ರಯತ್ನವಿದ್ದಾಗ ಎಲ್ಲವೂ ಸಾಧ್ಯ. ಈ ಸಭಾಂಗಣಕ್ಕಾಗಿ ಸಾಮಾನ್ಯ ಕುಟುಂಬದಿಂದ ಬಂದ ಯುವಕರು ಇಲ್ಲಿ ರಾತ್ರಿ ಹಗಲು ನಿಂತು ಕೆಲಸ ಮಾಡಿದ್ದಾರೆ. ಅದಕ್ಕೆ ಒಳ್ಳೆಯ ಮನಸ್ಸು ಬೇಕು. ಯುವಜನರ ಮನೆಯವರ ಪ್ರೋತ್ಸಾಹ ಕೂಡ ಗಮನಾರ್ಹ. ಎಲ್ಲರೂ ಒಟ್ಟು ಸೇರಿ ಕಾರ್ಯಕ್ರಮ ನಡೆಸಲು ಇಂತಹ ಸಭಾಂಗಣ ಅಗತ್ಯ. ಸಭಾಂಗಣಕ್ಕೆ ವೈಯಕ್ತಿಕವಾಗಿಯಷ್ಟೇ ಅಲ್ಲದೆ, ಸರಕಾರದಿಂದ ಒದಗಿಸಬಹುದಾದ ಸೌಕರ್ಯಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ” ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ 38 ವರ್ಷ ಕರ್ತವ್ಯ ನಿರ್ವಹಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ನಿವೃತ್ತರಾದ ಅಳದಂಗಡಿಯ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, “ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಕುದ್ಯಾಡಿ ಗ್ರಾಮ ಕಷ್ಟಗಳನ್ನು ಅನುಭವಿಸಿ ಕ್ರಮೇಣ ಅಭಿವೃದ್ಧಿ ಕಂಡಿದೆ. ಈ ಗ್ರಾಮದ ಹಿರಿಯರು, ಕ್ಷೇತ್ರ ಹಾಗೂ ಅಳದಂಗಡಿ ಅರಮನೆಯ ನಂಟು ಹಿಂದಿನಿಂದಲೂ ಇದೆ. ಊರು ಇದೇ ರೀತಿ ಒಗ್ಗಟ್ಟಿನಿಂದ ಇರಲಿ. ಸದುದ್ದೇಶದಿಂದ ಸಂಘಟಿತರಾಗಿ ಕೆಲಸ ಮಾಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ. ಮಕ್ಕಳು ಕೂಡ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ಯಶಸ್ವಿಗಳಾಗಿ” ಎಂದರು.

ಸಭಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಿತ್ಯಾನಂದ ನಾವರ, ಆಮಂತ್ರಣ ಪರಿವಾರದ ಸಂಚಾಲಕ ವಿಜಯ ಕುಮಾರ್ ಜೈನ್ ಅಳದಂಗಡಿ ಶುಭ ಹಾರೈಸಿದರು.

ಪ್ರಗತಿ ಪರ ಕೃಷಿಕ, ಸದ್ಧರ್ಮ ಯುವಕ ಮಂಡಲದ ಮಾರ್ಗದರ್ಶಕ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕ ಮಂಡಲದ ಹುಟ್ಟು ಮತ್ತು ಬೆಳವಣಿಗೆ ಕುರಿತು ಬೆಳಕು ಚೆಲ್ಲಿದರು.

ಸದ್ಧರ್ಮ ಯುವಕ ಮಂಡಲದ ಅಧ್ಯಕ್ಷ ಸದಾನಂದ ಬಿ. ಬಾಕ್ಯರಡ್ಡ ಅಧ್ಯಕ್ಷತೆ ವಹಿಸಿದ್ದರು.

ಅಳದಂಗಡಿಯ ಪದ್ಮಾಂಬ ಗ್ರೂಪ್ಸ್ ಮಾಲಕ ನಾಗಕುಮಾರ್ ಜೈನ್ ಕುಬಲಾಜೆ ಉಪಸ್ಥಿತರಿದ್ದರು.

ಅತಿಥಿಗಳು, ದಾನಿಗಳು ಹಾಗೂ ಶ್ರಮದಾನಿಗಳನ್ನು ಸನ್ಮಾನಿಸಲಾಯಿತು.

ಯುವಕ ಮಂಡಲದ ಕಾರ್ಯದರ್ಶಿ ಪ್ರಸಾದ್ ಬಿರ್ಮಜಿರಿ ಸ್ವಾಗತಿಸಿದರು. ಸಜಿತ್ ಪಿಜತ್ಯರಡ್ಡ ವಂದಿಸಿದರು. ಪ್ರಶಾಂತ್ ಎಚ್‌. ನಿರೂಪಿಸಿದರು.

ಅಂಗನವಾಡಿ ಮಕ್ಕಳಿಂದ ನೃತ್ಯ, ಪುಂಜಾಲಕಟ್ಟೆಯ ತಾಂಬೂಲ ಕಲಾವಿದೆರ್ ತಂಡದಿಂದ ‘ಸಂಕಲೆ’ ನಾಟಕ ಪ್ರದರ್ಶನ ನಡೆಯಿತು.

Leave a Reply

Your email address will not be published. Required fields are marked *