ಪುತ್ತೂರು:(ಜು.5) ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತದ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ ಜೆ.ರಾವ್ ನನ್ನು ಪೊಲೀಸರು ಮೈಸೂರು ಸಮೀಪ ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಇದನ್ನೂ ಓದಿ: ⭕ಪುತ್ತೂರು: ನಾಪತ್ತೆಯಾದ ಪುತ್ತೂರಿನ ವಿದ್ಯಾರ್ಥಿನಿ ಪತ್ತೆ
ಹೈಸ್ಕೂಲ್ ಓದುವ ಸಂದರ್ಭ ಸಹಪಾಠಿಯಾಗಿದ್ದು ಪ್ರಸ್ತುತ ಪದವಿ ವಿದ್ಯಾರ್ಥಿನಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಆರೋಪಿ ಆಕೆಯನ್ನು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕರೆಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ ಯುವತಿ ಗರ್ಭವತಿಯಾಗಿದ್ದು ಇತ್ತೀಚೆಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಈ ಮಧ್ಯೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶ್ರೀಕೃಷ್ಣ ಜೆ.ರಾವ್ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಆರೋಪಿಸಿ ಸಂತ್ರಸ್ತೆ ಆತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರಂಭದಲ್ಲಿ ಜೂ.11ಕ್ಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆ ಸಂದರ್ಭ ಆರೋಪಿ ಶ್ರೀಕೃಷ್ಣ ಜೆ.ರಾವ್ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರು, ಪುತ್ರನಿಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ವಿವಾಹ ಮಾಡಿಕೊಡುವುದಾಗಿ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು.
ಒಂದು ವೇಳೆ ಮಗ ವಿವಾಹಕ್ಕೆ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದೆಂದೂ ತಿಳಿಸಿದ್ದರು.ಆದರೆ ಆರೋಪಿ ಶ್ರೀಕೃಷ್ಣ ಜೆ. ರಾವ್ ಗೆ ಜೂ.23ಕ್ಕೆ 21 ವರ್ಷ ತುಂಬಿದ ಬಳಿಕ ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪದ ಹಿನ್ನೆಲೆಯಲ್ಲಿ ಜು.24ರಂದು ಸಂತ್ರಸ್ತ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ವಿರುದ್ದ ದೂರು ದಾಖಲಾಗುತ್ತಲೇ ಆರೋಪಿ ಶ್ರೀಕೃಷ್ಣ ಜೆ.ರಾವ್ ನಾಪತ್ತೆಯಾಗಿದ್ದ. ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ ಆತನ ತಂದೆ ಪಿ.ಜಿ.ಜಗನ್ನಿವಾಸ ರಾವ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗಾಗಿ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಂದೆಡೆ, ಆರೋಪಿಯ ಬಂಧನಕ್ಕೆ ವ್ಯಾಪಕ ಆಗ್ರಹ ವ್ಯಕ್ತವಾಗತೊಡಗಿತು. ವಿವಿಧ ಪ್ರತಿಭಟನೆ, ಮನವಿ ಸಲ್ಲಿಕೆ ನಡೆದಿತ್ತು. ಸಂತ್ರಸ್ತೆಯ ಮನೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಸಂತೈಸಿದ್ದರು. ಆರೋಪಿಯ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗತೊಡಗಿತು. ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆ ತರುವ ನಿಟ್ಟಿನಲ್ಲಿ ವಿಶೇಷ ತಂಡ ರಚನೆ ಮಾಡಿದ್ದರು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಿ.ಜಿ.ಜಗನ್ನಿವಾಸ್ ರಾವ್ ಅವರ ಆರೋಗ್ಯ ಸ್ಥಿತಿ ಕುರಿತು ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಆಸ್ಪತ್ರೆಗೆ ತೆರಳಿ ವೈದ್ಯರಿಂದ ಪಾಹಿತಿ ಪಡೆದುಕೊಂಡಿದ್ದರು.ಆರೋಪಿಯ ಇರುವಿಕೆಯ ಕುರಿತು ಮಾಹಿತಿ ಇದ್ದರೆ ತಿಳಿಸುವಂತೆ ಆತನ ಮನೆಯವರಿಗೆ ಪೊಲೀಸರು ಸೂಚನೆ ನೀಡಿದ್ದರು.
ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚುತ್ತಲೇ ಪೊಲೀಸರು ಆರೋಪಿಯ ಕುರಿತು ಸುಳಿವು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದರು. ಆರೋಪಿಯ ದೊಡ್ಡಪ್ಪ ಪಿ.ಜಿ.ಚಂದ್ರಶೇಖರ್ ಅವರನ್ನು ಜು.3ರಂದು ಠಾಣೆಗೆ ಕರೆದೊಯ್ದು ಬೆಳಗ್ಗಿನ ತನಕ ಪೊಲೀಸ್ ಠಾಣೆಯಲ್ಲಿ ಕುಳ್ಳರಿಸಿದ್ದ ಪೊಲೀಸರು ಆರೋಪಿಯ ಕುರಿತು ವಿಚಾರಿಸಿದ್ದರು. ಆರೋಪಿ ಪರಾರಿಯಾಗಲು ಸಹಕರಿಸಿದ್ದರೆಂದು ಇಬ್ಬರು ಕಲಾವಿದರನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ.

ಇದೀಗ ಕೊನೆಗೂ ಆರೋಪಿ ಶ್ರೀಕೃಷ್ಣ ಜೆ.ರಾವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರಿನಿಂದ ತೆರಳಿರುವ ಪೊಲೀಸರ ತಂಡವೊಂದು ಮೈಸೂರು ಸಮೀಪ ಆರೋಪಿ ಇರುವುದನ್ನು ಪತ್ತೆ ಮಾಡಿ ಅಲ್ಲಿಂದ ವಶಕ್ಕೆ ಪಡೆದುಕೊಂಡು ಆಗಮಿಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಮತ್ತೊಂದೆಡೆ ಉಡುಪಿ ಸಮೀಪದಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದೂ ವರದಿಯಾಗಿದೆ.
ಆರೋಗ್ಯದಲ್ಲಿ ಏರುಪೇರಾಗಿ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರೋಪಿ ಶ್ರೀಕೃಷ್ಣ ಜಿ.ರಾವ್ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರು ಜು.4ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೇ ಪೊಲೀಸರ ತಂಡ ಅವರನ್ನೂ ತಮ್ಮ ಜೊತೆಗೆ ಕರೆದೊಯ್ದು ಆರೋಪಿಯನ್ನು ಬಂಧಿಸಿ ಕರೆತರುತ್ತಿರುವುದಾಗಿ ವರದಿಯಾಗಿದೆ.

ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚಾಗುತ್ತಲೇ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದರು.ಈ ಮಧ್ಯೆ ಆರೋಪಿಯು ಇತರ ಮೂವರೊಂದಿಗೆ ಕಾರೊಂದರ ಒಳಗೆ ಇದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ, ಪಿ.ಜಿ.ಜಗನ್ನಿವಾಸ್ ರಾವ್ ಅವರು ದಾಖಲಾಗಿದ್ದ ಆಸ್ಪತ್ರೆಗೆ ಬೆಳಿಗ್ಗೆ ಡಿವೈಎಸ್ಪಿ ಅರುಣ್‌ನಾಗೇಗೌಡ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಆರೋಪಿಯ ಕುರಿತು ವಿಚಾರಿಸಿತ್ತು. ಈ ವೇಳೆ ಆರೋಪಿ ಪರ ವಕೀಲರು ಮತ್ತು ಸಂಘಟನೆಯ ಕೆಲವು ಮುಖಂಡರೂ ಇದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪಿ.ಜಿ.ಜಗನ್ನಿವಾಸ್ ರಾವ್ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದು ಪೊಲೀಸರು ಅವರನ್ನೂ ಜೊತೆಗೆ ಕರೆದೊಯ್ದು ಆರೋಪಿಯ ಪತ್ತೆಗಾಗಿ ತೆರಳಿದ್ದು ಇದೀಗ ಪೊಲೀಸರ ವಶವಾಗಿರುವುದಾಗಿ ತಿಳಿದು ಬಂದಿದೆ. ಮೆಡಿಕಲ್ ಟೆಸ್ಟ್ ಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಶ್ರೀಕೃಷ್ಣ.ಜೆ. ರಾವ್ ನನ್ನು ಪೋಲೀಸರು ಕರೆತಂದಿದ್ದಾರೆ. ಆರಾಮವಾಗಿ ಪೋಲೀಸ್ ಜೀಪ್ ನಿಂದ ಇಳಿದು ಆಸ್ಪತ್ರೆಯೊಳಗೆ ಶ್ರೀಕೃಷ್ಣ.ಜೆ. ರಾವ್ ಪ್ರವೇಶಿಸಿದ್ದಾನೆ.
