Fri. Jul 18th, 2025

ಉಜಿರೆ: “ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆ: ಒಂದು ವೈಜ್ಞಾನಿಕ ದೃಷ್ಟಿಕೋನ” ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮ

ಉಜಿರೆ, (ಜು.18): ವಿಜ್ಞಾನ, ಕಲೆ, ಆಧ್ಯಾತ್ಮಿಕತೆ ಹೀಗೆ ಎಲ್ಲವನ್ನೂ ಒಳಗೊಂಡಿರುವ ಸಾಂಪ್ರದಾಯಿಕ ಭಾರತೀಯ ಜ್ಞಾನವ್ಯವಸ್ಥೆಯು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗಬೇಕಿದೆ ಎಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಎನ್.ಸಿ.ಇ.ಆರ್.ಟಿ.)ಯ ಸಹಾಯಕ ಪ್ರಾಧ್ಯಾಪಕ, ಯುವ ವಿಜ್ಞಾನಿ ಡಾ. ಅರ್ಪಣ್ ಕುಮಾರ್ ನಾಯಕ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🟢ಬೆಳ್ತಂಗಡಿ: ಕೃಷಿ ಜಾಗದ ನೋಂದಣಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗವು ಜು.12 ರಂದು ಆಯೋಜಿಸಿದ್ದ ‘ಸಾಂಪ್ರದಾಯಿಕ ಭಾರತೀಯ ಜ್ಞಾನ ವ್ಯವಸ್ಥೆ: ಒಂದು ವೈಜ್ಞಾನಿಕ ದೃಷ್ಟಿಕೋನ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಭಾರತೀಯ ಸಾಂಪ್ರದಾಯಿಕ ಜ್ಞಾನವ್ಯವಸ್ಥೆಯು ಬ್ರಿಟಿಷರ ಆಡಳಿತ ಪರಿಣಾಮವಾಗಿ ಎಲ್ಲಿಯೂ ನಿಖರವಾಗಿ ದಾಖಲಾಗಿಲ್ಲ. ಇಂದಿನ ಪಠ್ಯಪುಸ್ತಕಗಳು ಕೂಡ ಅವುಗಳ ಕುರಿತಾಗಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಾವಿರಾರು ವರ್ಷಗಳು ಕಳೆದರೂ ದೃಢವಾಗಿ ನಿಂತಿರುವ ಪುರಾತನ ಕಟ್ಟಡಗಳ ನಿರ್ಮಾಣ ಮಾಡಲು ಬಳಸಿರುವ ಸಾಂಪ್ರದಾಯಿಕ ಜ್ಞಾನವ್ಯವಸ್ಥೆಯು ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕಿದೆ ಎಂದು ಅವರು ಹೇಳಿದರು.

“ಆಧುನಿಕ ವಿಜ್ಞಾನಕ್ಕೂ ಸವಾಲೆಸೆಯುವ ಶಿಲ್ಪಕಲೆಗಳ ರಚನೆ ಪುರಾತನ ಕಾಲದಲ್ಲಿ ನಡೆದಿದೆ. ತಂತ್ರಜ್ಞಾನದ ಸಹಾಯವಿಲ್ಲದೆ ಕೇವಲ ಇತರರಿಂದ ಕೇಳಿ, ನಿರಂತರ ಅಭ್ಯಾಸ ಮತ್ತು ಪ್ರಯೋಗಗಳಿಂದಲೇ ನಿರ್ಮಾಣಗೊಂಡ ಅವುಗಳ ಹಿಂದೆ ಒಂದು ವೈಜ್ಞಾನಿಕ ದೃಷ್ಟಿಕೋನವಿದೆ. ಅದನ್ನು ಗುರುತಿಸುವಲ್ಲಿ ನಾವುಗಳು ಎಡವುತ್ತಿದ್ದೇವೆ. ಯಾವುದೇ ಕಲಿಕೆಯಿಲ್ಲದೆಯೇ ನಮ್ಮ ಪೂರ್ವಜರು ಗಣಿತಶಾಸ್ತ್ರ, ಭೌತಶಾಸ್ತ್ರ ಹಾಗೂ ಖಗೋಳ ಶಾಸ್ತ್ರಗಳನ್ನು ಪುರಾತನ ಕಟ್ಟಡಗಳ ನಿರ್ಮಾಣದಲ್ಲಿ ಬಳಸಿಕೊಂಡಿರುವ ರೀತಿ ನಿಜಕ್ಕೂ ಮೆಚ್ಚುವಂತದ್ದು. ಅವರು ವಿಜ್ಞಾನವನ್ನು ಬಳಸಿಕೊಂಡಿರುವ ರೀತಿ ಮತ್ತು ಅವರ ಕೆಲಸಗಳಲ್ಲಿದ್ದ ಪರಿಪೂರ್ಣತೆಯನ್ನು ನಾವು ಅಳವಡಿಸಿಕೊಳ್ಳಬೇಕಿದೆ” ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಉಪ ಪ್ರಾಂಶುಪಾಲೆ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದ ಕುಮಾರಿ ಕೆ.ಪಿ. ಹಾಗೂ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಜ್ಯೋತಿಕಾ ಕಾರ್ಯಕ್ರಮ ನಿರೂಪಿಸಿ, ಹೇಮಾವತಿ ವಂದಿಸಿದರು.

Leave a Reply

Your email address will not be published. Required fields are marked *