ಪುತ್ತೂರು:(ಜು.26) ವ್ಯಕ್ತಿಯೊಬ್ಬರಿಗೆ ಏಕಾಏಕಿ ಗಂಭೀರವಾಗಿ ಹಲ್ಲೆ ಮಾಡಿ ಜೀವಬೆದರಿಕೆಯೊಡ್ಡಿದ ಘಟನೆ ಪುತ್ತೂರಿನ ಕೋರ್ಟ್ ರೋಡ್ ರಿಕ್ಷಾ ನಿಲ್ದಾಣದ ಬಳಿ ನಡೆದಿದೆ.

ಗಂಭೀರವಾಗಿ ಹಲ್ಲೆಗೊಳಗಾದವರನ್ನ ಪುತ್ತೂರಿನ ಉರ್ಲಾಂಡಿ ನಿವಾಸಿ ಹರೀಶ್ ಕುಮಾರ್ ಹೆಗ್ಡೆ (52) ಎಂದು ಗುರುತಿಸಲಾಗಿದೆ. ಐಐಎಫ್‍ಎಲ್ ಫೈನಾನ್ಸ್ ನ ಮ್ಯಾನೇಜರ್ ಆಗಿರುವ ಪ್ರಸಾದ್ ಗೌಡ ಎಂಬವರು ಹರೀಶ್ ಕುಮಾರ್ ಹೆಗ್ಡೆಗೆ ಗಂಭೀರವಾಗಿ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಡಿ ಸ್ಕ್ಯಾನಿಂಗ್ ಸ್ಟಿಕ್ (ದೈಹಿಕ ಪರಿವೀಕ್ಷಣೆ) ನಲ್ಲಿ ಹರೀಶ್ ಕುಮಾರ್ ಹೆಗ್ಡೆ ಅವರ ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸ್ಟಿಕ್ ನಲ್ಲಿ ಹೊಡೆದ ಪರಿಣಾಮ ತಲೆಯಲ್ಲಿ ತೀವ್ರ ರಸ್ತಸ್ರಾವ ಉಂಟಾಗಿದೆ.
ಹಲ್ಲೆಗೊಳಗಾದವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಲ್ಲೆಗೊಳಗಾದ ಹರೀಶ್ ಕುಮಾರ್ ಹೆಗ್ಡೆ ಮೇಲೆ ಕೂಡ ಹಲ್ಲೆಗೈದ ಪ್ರಸಾದ್ ಗೌಡ ಆರೋಪ ಹೊರಿಸಿದ್ದಾರೆ. `ನನ್ನ ಮೇಲೂ ಕೂಡ ಹಲ್ಲೆ ಮಾಡಿದ್ದಾರೆಂದು’ ಆರೋಪಿಸಿ ಪ್ರಸಾದ್ ಗೌಡ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಹರೀಶ್ ಕುಮಾರ್ ಹೆಗ್ಡೆ ಈ ಹಿಂದೆ ಕಡಬದಲ್ಲಿ ಗ್ರಾಮಾಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಆಸ್ಪತ್ರೆಗೆ ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಆಂಜನೇಯ ರೆಡ್ಡಿ, ಉಪನಿರೀಕ್ಷಕ ಜಾನ್ಸನ್ ಡಿಸೋಜ ಆಗಮಿಸಿ ಹಲ್ಲೆಗೊಳಗಾದ ವ್ಯಕ್ತಿಯಿಂದ ಮಾಹಿತಿ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
