ಧರ್ಮಸ್ಥಳ:(ಆ.4) ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ ಬಿ. ಇ.6: ಕಾರನ್ನು (K.A.21MA. 6033) ಉತ್ಪಾದನಾ ವಿಭಾಗದ ಮುಖ್ಯಸ್ಥರಾದ ವಿನಯ್ ಖಾನೋಲ್ಕರ್ ಭಾನುವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಕೊಡುಗೆಯಾಗಿ ಅರ್ಪಿಸಿದರು.

ಹೊಸ ಮಾದರಿಯ ವಾಹನ ತಯಾರಾದ ಕೂಡಲೇ ಅದನ್ನು ಕಾಣಿಕೆಯಾಗಿ ಧರ್ಮಸ್ಥಳಕ್ಕೆ ಅರ್ಪಿಸುವುದು ತಮ್ಮ ಕಂಪೆನಿಯ ಸಂಪ್ರದಾಯವಾಗಿದೆ. ಇದರಿಂದ ಕಂಪೆನಿ ಉನ್ನತ ಪ್ರಗತಿ ಸಾಧಿಸಿದೆ ಎಂದು ಹೊಸ ಕಾರಿನ ಕೀಯನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಿದ ಕಂಪೆನಿಯ ಉತ್ಪಾದನಾ ವಿಭಾಗದ ಮುಖ್ಯಸ್ಥ ವಿನಯ್ ಖಾನೋಲ್ಕರ್ ತಿಳಿಸಿದರು.
ಕಂಪೆನಿಯ ಉದಾರ ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆಯವರು ಕಂಪೆನಿಯು ಈ ಹಿಂದೆ ತಯಾರಿಸಿದ ಹೊಸ ಮಾದರಿಯ ವಾಹನಗಳನ್ನು ಪ್ರಥಮವಾಗಿ ಧರ್ಮಸ್ಥಳಕ್ಕೆ ಅರ್ಪಿಸಿದ್ದು, ಇದು ಅವರ ಮೂರನೇ ಕೊಡುಗೆಯಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಇವರ ವಾಹನಗಳನ್ನು ಬಳಸಿಕೊಳ್ಳುತ್ತೇವೆ. ದೇಶದ ಪ್ರತಿಷ್ಠಿತ ಮಹೇಂದ್ರ ಕಂಪೆನಿಯ ವಾಹನಗಳು ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮ ಸೇವೆ ನೀಡುತ್ತಿವೆ. ದೇಶದ ಸೇನೆಯ ವಿಭಾಗಕ್ಕೂ ಅವರು ವಾಹನಗಳನ್ನು ಪೂರೈಸುತ್ತಿದ್ದು, ತನ್ಮೂಲಕ ದೇಶಸೇವೆಗೂ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಹೇಳಿ ಹೆಗ್ಗಡೆಯವರು ಕಂಪೆನಿಯ ವ್ಯವಹಾರದಲ್ಲಿ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲಿ ಎಂದು ಶುಭ ಹಾರೈಸಿದರು. ಬಳಿಕ ಹೆಗ್ಗಡೆಯವರು ಕಾರನ್ನು ಚಾಲನೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆಯವರು, ಅಮಿತ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.

