ಕೊಪ್ಪಳ (ಆ.04): ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ್ದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ನ ಕೊಲೆ ಮಾಡಲಾಗಿದೆ. ಸದ್ಯ ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: 🔴ಉಜಿರೆ: ಎಸ್.ಡಿ.ಎಂ. ಕಾಲೇಜು ಎನ್ನೆಸ್ಸೆಸ್ ಘಟಕ ನಾಯಕರ ಆಯ್ಕೆ
ಕೊಲೆ ಮಾಡಿ ಶರಣಾದ ಆರೋಪಿ
ಗವಿಸಿದ್ದಪ್ಪನನ್ನ ಕೊಲೆ ಮಾಡಿದ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್ಎಸ್ 2023 ಕಲಂ 3(2)ವಿ, ಎಸ್ಸಿ-ಎಸ್ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.
ಈ ಕೊಲೆಗೆ ಕಾರಣವಾಗಿದ್ದು ಗವಿಸಿದ್ದಪ್ಪ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು. ಕಳೆದ ಎರಡು ವರ್ಷಗಳಿಂದ ಗವಿಸಿದ್ದಪ್ಪ, ಗೌರಿ ಅಂಗಳ ಏರಿಯಾದ ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಜೊತೆಗೆ ಮನೆ ಬಿಟ್ಟು ಓಡಿ ಸಹ ಹೋಗಿದ್ದರು. ಈ ಕುರಿತಂತೆ ನಾಲ್ಕೈದು ಬಾರಿ ಪಂಚಾಯತಿ ಸಹ ಮಾಡಲಾಗಿತ್ತು. ಆದರೂ ಸಹ ಗವಿಸಿದ್ದಪ್ಪ ಹಾಗೂ ಮುಸ್ಲಿಂ ಯುವತಿಯ ನಡುವೆ ಪ್ರೀತಿ ಮುಂದುವರೆದಿತ್ತು. ಹೀಗಾಗಿ ಗವಿಸಿದ್ದಪ್ಪನನ್ನು ಸಾದಿಕ್ ಮಚ್ಚಿನಿಂದ ಕೊಲೆ ಮಾಡಿದ್ದಾನೆ.

ಸದ್ಯ ಇದೊಂದು ಪಕ್ಕಾ ಪ್ರೀ ಪ್ಲ್ಯಾನ್ಡ್ ಮರ್ಡರ್ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಹದ್ದೂರ ಬಂಡಿ ರಸ್ತೆಯಿಂದ ಬರುತ್ತಿದ್ದ ಗವಿ ಸಿದ್ದಪ್ಪನನ್ನು ಅಡ್ಡ ಹಾಕಿ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಪ್ಪಳ ನಗರದಲ್ಲಿ ಇಷ್ಟೊಂದು ಭೀಕರ ಕೊಲೆ ನಡೆದಿರಲಿಲ್ಲ. ಯಾವಾಗ ಇಂತಹದ್ದೊಂದು ಕೊಲೆ ಸುದ್ದಿ ಕೇಳಿದ ಬಳಿಕ ಇಡೀ ನಗರದ ಜನ ಬೆಚ್ಚಿ ಬಿದ್ದಿದ್ದಾರೆ. ಇನ್ನು ಕೊಲೆಯಾದ ಯುವಕ ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಯಮನೂರಪ್ಪ ನಾಯಕ್ ಸಂಬಂಧಿ.
ಇನ್ನು ಮೂಲಗಳ ಪ್ರಕಾರ ಈ ಮೊದಲು ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಮುಸ್ಲಿಂ ಅಪ್ರಾಪ್ತ ಯುವತಿಯನ್ನು ಸಾದಿಕ್ ಪ್ರೀತಿಸುತ್ತಿದ್ದನಂತೆ. ಸಾದಿಕ್ನೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡ ಯುವತಿ ಗವಿಸಿದ್ದಪ್ಪನನ್ನು ಪ್ರೀತಿಸಲು ಶುರು ಮಾಡಿದ್ದಳು. ಈ ವಿಷಯ ತಿಳಿದ ಸಾದಿಕ್ ಅನೇಕ ಬಾರಿ ಗವಿಸಿದ್ದಪ್ಪನೊಂದಿಗೆ ಜಗಳ ಸಹ ಮಾಡಿದ್ದನಂತೆ. ಈ ವಿಷಯ ಅತಿರೇಕಕ್ಕೆ ಹೋಗಿ ರವಿವಾರ ರಾತ್ರಿ 8 ಗಂಟೆಗೆ ಮಸೀದಿ ಬಳಿ ಬೈಕ್ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಪ್ರೀತಿ ವಿಚಾರವಾಗಿ ಕೊಲೆ
ಘಟನೆಯ ಸುದ್ದಿ ತಿಳಿಯುತ್ತಲೇ ಎಸ್ಪಿ ಡಾ. ರಾಮ್ ಅರಸಿದ್ದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಬಳ್ಳಾರಿ ಐಜಿಪಿ ವರ್ತಿಕಾ ಕಟಿಯಾರ್ ಸಹ ಕೊಪ್ಪಳಕ್ಕೆ ಭೇಟಿ ನೀಡಿ ಸಿಟಿ ರೌಂಡ್ಸ್ ಹಾಕಿದರು. ಸದ್ಯ ಸಾದಿಕ್ ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಆತನಿಗೆ ಸಹಾಯ ಮಾಡಿದ ಇಬ್ಬರು ಮೂವರು ನಾಪತ್ತೆಯಾಗಿದ್ದಾರೆ. ಕೊಲೆ ಮಾಡಿ ಶರಣಾದ ಸಾದಿಕ್ ಪ್ರೀತಿ ವಿಚಾರವಾಗಿ ಕೊಲೆ ಮಾಡಿದ್ದೇನೆಂದು ಒಪ್ಪಿಕೊಂಡಿದ್ದಾನೆ.

ಘಟನಾ ಸ್ಥಳದಲ್ಲಿ ಎರಡು ಮಚ್ಚುಗಳು ಪತ್ತೆಯಾಗಿವೆ, ಆದರೆ ಪೊಲೀಸರು ಮಾತ್ರ ಸಾದಿಕ್ ಒಬ್ಬನೇ ಕೊಲೆ ಮಾಡಿದ್ದಾನೆ ಎನ್ನುವುದು ಹಲವು ಅನುಮಾನಗಳನ್ನು ಉಂಟುಮಾಡಿದೆ. ಇನ್ನು ಮೂಲಗಳ ಪ್ರಕಾರ ಮೂರು ಜನ ಮುಸ್ಲಿಂ ಯುವಕರು ಸೇರಿ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನುಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
