ಉಜಿರೆ:(ಆ.4) ಕನಸುಗಳು ಸಾಧನೆಯ ಮೊದಲ ಹಂತ. ಅವುಗಳು ವಿಶಾಲವಾದಷ್ಟು ಸಾಧನೆಯೂ ಕೂಡ ವಿಶಾಲವಾಗುತ್ತದೆ. ಹಾಗಾಗಿ ಸಾಧನೆಯ ಹಾದಿಯಲ್ಲಿ ಕನಸು ಕಾಣುವುದು ಅಗತ್ಯ ಎಂದು ಉಜಿರೆಯ ದಂತ ಚಿಕಿತ್ಸಾಲಯದ ದಂತ ವೈದ್ಯೆ ಡಾ. ದೀಪಾಲಿ ಎಸ್. ಡೋಂಗ್ರೆ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಗಂಡ ಬೇಡ ಆತನ ಸ್ನೇಹಿತನೇ ಬೇಕೆಂದು ಪಟ್ಟು ಹಿಡಿದ ಮಹಿಳೆ
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ “ಆಕಾಶಕ್ಕೆ ಏಣಿ ಹಾಕಿ” ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಮಹಿಳಾ ಕುಂದುಕೊರತೆ ನಿವಾರಣಾ ಕೋಶ, ಆಂತರಿಕ ದೂರು ಸಮಿತಿ ಮತ್ತು ಮಹಿಳಾ ಅಭಿವೃದ್ಧಿ ಕೋಶದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
“ನಮ್ಮ ಬಲಾಬಲಗಳನ್ನು ಅರಿತುಕೊಂಡು ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡಬೇಕು. ನಮ್ಮಲ್ಲಿರುವ ಅತ್ಯುತ್ತಮ ಗುಣವನ್ನು ಗುರುತಿಸಿಕೊಂಡು ಅದನ್ನು ನಮ್ಮ ಬಲವಾಗಿ ರೂಪಿಸಿಕೊಳ್ಳಬೇಕು. ನಮ್ಮ ಕುರಿತಾಗಿ ನಾವೇ ಆತ್ಮಾಭಿಮಾನ ಬೆಳೆಸಿಕೊಳ್ಳುವುದು ಅತ್ಯಗತ್ಯ. ನಮ್ಮನ್ನು ನಾವೇ ಶ್ಲಾಘಿಸಿಕೊಂಡು ಇತರರ ಶ್ಲಾಘನೆಯ ಹಂಬಲ ಬಿಡಬೇಕು” ಎಂದರು.
ಮಹತ್ವಾಕಾಂಕ್ಷಿಗಳಾಗಿ ಬದುಕಬೇಕು. ಪ್ರತಿಯೊಂದು ವಿಚಾರದ ಕುರಿತಾಗಿಯೂ ಆಸೆ-ಆಕಾಂಕ್ಷೆಗಳಿರಲಿ ಆದರೆ ಅವುಗಳೆಂದೂ ದುರಾಸೆಯ ರೂಪ ಪಡೆಯದಿರಲಿ. ಇನ್ನೊಬ್ಬರನ್ನು ತುಳಿದು ಮೇಲಕ್ಕೇರುವ ಕಿಚ್ಚು ದೂರವಾಗಿ ನಮ್ಮ ಜೊತೆಯಲ್ಲಿ ಇತರರನ್ನೂ ಮೇಲಕ್ಕೆತ್ತುವ ಹೃದಯ ಶ್ರೀಮಂತಿಕೆ ನಮ್ಮದಾಗಬೇಕು. ಬದುಕಿನಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ನಿರಂತರವಾಗಿ ಪ್ರಯತ್ನ ಪಟ್ಟರೆ ಮಾತ್ರ ಯಶಸ್ಸು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.

ನಾವು ಮಾಡುವ ಕೆಲಸದ ಬಗ್ಗೆ ನಮಗೆ ಆತ್ಮತೃಪ್ತಿಯಿರಬೇಕು. ಯಾರದೋ ಒತ್ತಡಕ್ಕೆ ಮಣಿದು ಒಲ್ಲದ ಕೆಲಸವನ್ನು ಮಾಡುವ ಆವಶ್ಯಕತೆಯಿಲ್ಲ. ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಗುರಿಯ ಕಡೆಗೆ ಗಮನಹರಿಸಬೇಕು. ತಮ್ಮೊಳಗಿನ ನೋವು ದುಗುಡಗಳನ್ನು ಮುಚ್ಚಿಡದೆ ಸೂಕ್ತವೆನಿಸುವ ವ್ಯಕ್ತಿಗಳ ಜೊತೆಗೆ ಹಂಚಿಕೊಳ್ಳಬೇಕು. ಈಗಿನ ಯುವ ಜನಾಂಗಕ್ಕೆ ಒತ್ತಡ ತಡೆದುಕೊಳ್ಳುವ ಶಕ್ತಿ, ಮನೋಸ್ಥೈರ್ಯ ಮೈಗೂಡಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಉಪ ಪ್ರಾಂಶುಪಾಲೆ ನಂದ ಕುಮಾರಿ ಕೆ.ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿಶಾಲವಾದ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ಸಾಕಾರಗೊಳಿಸಿಕೊಳ್ಳುವತ್ತ ಕಾರ್ಯಪ್ರವೃತ್ತರಾಗಬೇಕು ಎಂದರು.
ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕಿ ಅಕ್ಷತಾ ಜೈನ್ ಸ್ವಾಗತಿಸಿದರು. ಮಹಿಳಾ ಕುಂದುಕೊರತೆ ನಿವಾರಣಾ ಕೋಶ ಮತ್ತು ಆಂತರಿಕ ದೂರು ಸಮಿತಿಯ ಅಧ್ಯಕ್ಷೆ ದೀಪಾ ಆರ್.ಪಿ. ವಂದಿಸಿದರು. ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

