ಅನೇಕಲ್, (ಆ.07): ಸ್ನೇಹಿತನ ಹೆಂಡತಿಯನ್ನು ಹತ್ಯೆಗೈದು ಬಳಿಕ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯ ಅನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಬಳಿಯ ತಿರುಪಾಳ್ಯದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಪಶ್ಚಿಮ ಬಂಗಾಳ ಮೂಲದ ಮಂದಿರಾ ಮಂಡಲ್ (27) ಎಂದು ಗುರುತಿಸಲಾಗಿದೆ. ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ಗಂಡನ ಸ್ನೇಹಿತ ಸುಮನ್ ಮಂಡಲ್ ಎಂಬಾತನೇ ಮಂದಿರಾ ಮಂಡಲಳನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: ⭕ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ
ಎಂಟು ವರ್ಷದ ಹಿಂದೆ ಬಿಜೋನ್ ಮಂಡಲ್ ಜೊತೆ ಮೃತ ಮಂದಿರಾ ಮದುವೆ ಆಗಿದ್ದು 6 ವರ್ಷದ ಗಂಡು ಇದೆ. ಆದ್ರೆ ಎರಡು ವರ್ಷದ ಹಿಂದೆ ಗಂಡನಿಂದ ದೂರವಾಗಿ ಇಲ್ಲಿನ ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ನಿನ್ನೆ ಎಂದಿನಂತೆ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಿದ್ದಳು. ಮಗು ಹೊರಗೆ ಆಟವಾಡುತ್ತಿತ್ತು. ಈ ನಡುವೆ ಆರೋಪಿ ಸುಮನ್ ಮನೆಗೆ ನುಗ್ಗಿ ಬಾಗಿಲು ಲಾಕ್ ಮಾಡಿದ್ದಾನೆ. ಕೆಲ ಹೊತ್ತಿನ ಬಳಿಕ ಮಗು ಬಾಗಿಲು ಬಡಿದಿದೆ ಆದ್ರೆ ಬಾಗಿಲು ತೆರೆಯಲಿಲ್ಲ. ಇನ್ನೂ ಆತಂಕಗೊಂಡ ಮಗು ಅಜ್ಜಿಗೆ ವಿಚಾರ ತಿಳಿಸಿದೆ. ಆಕೆ ಬಾಗಿಲು ಬಡಿದರು ಉತ್ತರವಿಲ್ಲ. ಕೊನೆಗೆ ಕಿಟಿಕಿ ತೆರೆದು ನೋಡಿದಾಗ ಆರೋಪಿ ಸುಮನ್ (28)ನೇಣಿಗೆ ಶರಣಾಗಿರುವುದು ಕಂಡಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಗಿಲು ತೆರೆದು ಪರಿಶೀಲನೆ ವೇಳೆ ಒಂದು ಕೊಠಡಿಯಲ್ಲಿ ಮಂದಿರಾ ಮಂಡಲ್ ಕುತ್ತಿಗೆ ಸೀಳಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮತ್ತೊಂದು ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸುಮನ್ ಶವ ಪತ್ತೆಯಾಗಿದ್ದಾನೆ. ಕೊಲೆಯಾದ ಮಂದಿರಾ ಮಂಡಲ್ ಪತಿ ಬಿಜೋನ್ ಮಂಡಲ್ ಮತ್ತು ಸುಮನ್ ಮಂಡಲ್ ಸ್ನೇಹಿತರಾಗಿದ್ದು, ಎರಡು ವರ್ಷದಿಂದ ಅಂಡಮಾನ್ ನಲ್ಲಿ ಕೆಲಸ ಮಾಡುತ್ತಿದ್ದರು.
ಅದ್ರೆ ಹದಿನೈದು ದಿನಗಳ ಹಿಂದೆ ಆರೋಪಿ ಸುಮನ್ ಬೆಂಗಳೂರಿಗೆ ವಾಪಸ್ ಆಗಿದ್ದು, ತಿರುಪಾಳ್ಯದ ಪೋಷಕರ ಜೊತೆ ವಾಸವಾಗಿದ್ದು, ಕಾರ್ಖಾನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಸಹ ಕೆಲಸಕ್ಕೆ ಹೋಗಲು ಬುತ್ತಿ ಸಹಿತ ನೇರವಾಗಿ ಮಂದಿರಾ ಮನೆಗೆ ಬಂದಿದ್ದು, ಅಕ್ರಮ ಸಂಬಂಧಕ್ಕೆ ಒಪ್ಪದ ಹಿನ್ನೆಲೆ ಆಕ್ರೋಶಗೊಂಡು ತರಕಾರಿ ಕತ್ತರಿಸುವ ಚಾಕುವಿನಿಂದ ಕುತ್ತಿಗೆ ಸೀಳಿ ಕೊಂದು ಬಳಿಕ ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಸದ್ಯ ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

