ಉಜಿರೆ:(ಆ.13) ಬೇರೆ ಭಾಷೆ ಕಲಿಯುವುದು ತಪ್ಪು ಎಂಬ ಮನೋಭಾವ ದೂರವಾಗಬೇಕು, ಬಹುಭಾಷೆಗಳ ಜ್ಞಾನ ಪಡೆಯುವುದಕ್ಕೆ ವಿದ್ಯಾರ್ಥಿಗಳು ಆಸಕ್ತರಾಗಬೇಕು ಎಂದು ಉಜಿರೆ ಶ್ರೀ ಧ.ಮಂ. ವಸತಿಯುತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಉಡುಪಿ: ಮನೆಯವರ ಎದುರೇ ಯುವಕನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಅವರು ಹಿಂದಿ ಸಂಘ ಉದ್ಘಾಟನೆ ಹಾಗೂ ತರಗತಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಬಹುರಾಜ್ಯಗಳ ಮೂಲ ಭಾಷೆಯಾಗಿರುವ ಮತ್ತು ದೇಶದಲ್ಲೆಡೆ ಚಾಲ್ತಿಯಲ್ಲಿರುವ ಹಿಂದಿ ಭಾಷೆಯನ್ನು ನಾವು ಕಡೆಗಣಿಸುತ್ತಿದ್ದೇವೆ. ಪ್ರತಿಯೊಂದು ಭಾಷೆಗೂ ಅದರದೇ ಆದ ಸಾಹಿತ್ಯವಿದೆ. ಅದನ್ನು ಅಭ್ಯಸಿಸುವ ಸಾಹಿತ್ಯಾಭಿರುಚಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಪ್ರಾದೇಶಿಕ ಭಾಷೆಯ ಜೊತೆಗೆ ಇತರ ಭಾಷೆಗಳ ಜ್ಞಾನವಿದ್ದಾಗ ಹೊಸ ವಿಷಯ ಕಲಿಕೆ ಸುಲಭವಾಗುತ್ತದೆ” ಎಂದರು.

ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಕಾಲೇಜಿನಿಂದ ಹೊರಬರುತ್ತಾರೆ. ಆದರೆ ಅದರಲ್ಲಿ ಕನಿಷ್ಠ ಮಂದಿ ಮಾತ್ರ ಕೌಶಲ್ಯವುಳ್ಳವರಾಗಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಕೌಶಲ್ಯಾಭಿವೃದ್ಧಿಯ ಕಡೆಗೆ ಗಮನಹರಿಸದ ಪರಿಣಾಮ ಇಂದಿನ ಬಹುಪಾಲು ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಕೊರತೆ ಉಂಟಾಗುತ್ತಿದೆ. ಸೃಜನಶೀಲ ಕೌಶಲ್ಯಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದಾಗ ಸುದೃಢ ಭವಿಷ್ಯ ನಿರ್ಮಾಣ ಸಾಧ್ಯ ಎಂದರು.
ಕಾಲೇಜಿನ ಆಡಳಿತಾಂಗ ಕುಲಸಚಿವ, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಎನ್. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಹಿಂದಿ ಭಾಷೆಯನ್ನು ದಕ್ಷಿಣ ಭಾಗದ ಜನರು ದ್ವೇಷಿಸುತ್ತಾರೆ ಎಂಬ ಒಂದು ತಪ್ಪು ಕಲ್ಪನೆಯಿದೆ. ಅದು ಕೇವಲ ರಾಜಕೀಯ ತಂತ್ರವೇ ವಿನಹ ಅದರಲ್ಲಿ ಯಾವುದೇ ಹುರುಳಿಲ್ಲ. ಕ್ರಮೇಣ ಮೂರು ಭಾಷೆಗಳಿಗೆ ಪ್ರಾಮುಖ್ಯ ನೀಡುತ್ತಿದ್ದ ತ್ರಿಭಾಷಾ ಪದ್ಧತಿ ನಶಿಸಿ, ಪ್ರಾದೇಶಿಕ ಮತ್ತು ಆಂಗ್ಲಭಾಷೆಗಷ್ಟೇ ಸೀಮಿತವಾಗಿರುವ ದ್ವಿಭಾಷಾ ಪದ್ಧತಿ ಜಾರಿಯಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಜ್ಞಾನ ವಿಕಾಸ ಕುಂಠಿತವಾಗುತ್ತದೆ ಎಂದರು.

ವಿಭಾಗದ ಭಿತ್ತಿಪತ್ರಿಕೆ ‘ರತ್ನದೀಪ್’ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಹಿಂದಿ ವಿಭಾಗ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ್ ಎನ್., ಸಹಾಯಕ ಪ್ರಾಧ್ಯಾಪಕಿ ಶ್ರುತಿ ಎಂ. ಹಾಗೂ ಹಿಂದಿ ಭಾಷಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ದಿವ್ಯಲಕ್ಷ್ಮಿ ಸ್ವಾಗತಿಸಿ, ಅಪೂರ್ವ ವಂದಿಸಿದರು. ತೃತೀಯ ವರ್ಷದ ವಿದ್ಯಾರ್ಥಿನಿ ತನ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು.
