ಬೆಳ್ತಂಗಡಿ: ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನಮ್ಮ ದೇಶದಲ್ಲಿ ಹಲವಾರು ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳು ಮೇಳೈಸಿವೆ. ಆ ಕಾರಣಕ್ಕೆ ಸುಂದರ ಹೂದೋಟದಂತೆ ಕಂಗೊಳಿಸುವ ನಮ್ಮ ದೇಶ ಇಡೀ ಜಗತ್ತಿನಲ್ಲಿ ಪ್ರಬಲ ಪ್ರಜಾಪ್ರಭುತ್ತ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಜಾತಿ-ಮತ-ಧರ್ಮ ಭೇದವಿಲ್ಲದೇ ಹೋರಾಡಿದರು. ಅನ್ಯೋನ್ಯತೆಯಿಂದ ಕೂಡಿ ಬಾಳಿದರು. ಧರ್ಮ ಧರ್ಮಗಳ ಮಧ್ಯೆ ಸೇತುವೆಯನ್ನು ಕಟ್ಟಿದರು. ಧರ್ಮ ಯಾವುದೇ ಇದ್ದರೂ ಮಾನವಾಗಿ ಬಾಳಿ ಬದುಕಿದರು.

ಆದರೆ ದುರಾದೃಷ್ಟವಶಾತ್ ಇತ್ತೀಚಿನ ವರ್ಷಗಳಲ್ಲಿ ದೇಶದ ದಾರ್ಮಿಕ ಸೌಹಾರ್ದವನ್ನು ಕೆಡಿಸುವ ಹುನ್ನಾರ ವ್ಯಾಪಕವಾಗಿ ನಡೆಯುತ್ತಿದೆ. ಪರಸ್ಪರ ದ್ವೇಷ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ದೇಶದ ಚುಕ್ಕಾಣಿಯನ್ನು ಹಿಡಿದವರಿಂದ ಆರಂಭಿಸಿ ಸ್ಥಳೀಯ ಧುರೀಣರವರೆಗೆ ಅದು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಇದನ್ನು ಮನಗಂಡು ಜಮಾಅತೆ ಇಸ್ಲಾಮೀ ಹಿಂದ್ ಭಾರತದಾದ್ಯಂತ ಧಾರ್ಮಿಕ ಸೌಹಾರ್ದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಪ್ರವಾದಿ ಮುಹಮ್ಮದ್ (ಸ)ರ ಜನ್ಮ ತಿಂಗಳ ಪ್ರಯುಕ್ತ ಅವರ ಜೀವನಚರ್ಯೆಯನ್ನು ಪರಿಚಯಿಸುವ ಅಭಿಯಾನವನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ದಿನಾಂಕ 07/09,2025 ಆದಿತ್ಯವಾರ ಅಪರಾಹ್ನ 2.30ಕ್ಕೆ ‘ಧಾರ್ಮಿಕ ಸೌಹಾರ್ದ ಕಾಲ್ನಡಿಗೆ ಜಾಥಾ’ವನ್ನು ಹಾಗೂ ಸಂಜೆ 4.00ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಎಸ್.ಡಿ.ಎಂ. ಹಾಲ್‌ನಲ್ಲಿ ಸಾರ್ವಜನಿಕ ಸಮಾವೇಶ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು.
ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಈ ಸಂದರ್ಭ ದಲ್ಲಿ ಮುಹಮ್ಮದ್ ಇಸ್ಹಾಕ್, ಅಬ್ದುಲ್ ಕರೀಮ್ ಯು, ಝ್ವಾನ್ ಅಝ್ಹರಿ, ಸಾಜಿದಾ ಮೂಮಿನ್, ಯೂಸುಫ್ ಅಸ್ಲಾಮ್, ಆಯಿಶಾ ಅಮಾನ, ಅಮೀನ್ ಅಹ್ಸನ್ ಉಪಸ್ಥಿತರಿದ್ದರು.
