ಉಜಿರೆ: ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಾದ ಡಾ| ಪ್ರತೀಕ್ಷ್ ಪಿ. ಇವರು ಪುದುಚೇರಿಯ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆ.29 ರಿಂದ 31 ರವರೆಗೆ ನಡೆದ ದಕ್ಷಿಣ ಭಾರತೀಯ ರಾಜ್ಯಗಳ ಮೂಳೆಚಿಕಿತ್ಸಾ ಸಂಘದ 24ನೇ ವಾರ್ಷಿಕ ಸಮ್ಮೇಳನ ಓಯಸಿಸ್ಕಾನ್-2025 ಇದರಲ್ಲಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಪ್ರಮುಖ ಉಪನ್ಯಾಸ ನೀಡಿದರು.


ದಕ್ಷಿಣ ಭಾರತದ ರಾಜ್ಯಗಳ ಹೆಸರಾಂತ ಪ್ರಮುಖ ಮೂಳೆಚಿಕಿತ್ಸಾ ತಜ್ಞರ ಕೂಡುವಿಕೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಮೂಳೆಚಿಕಿತ್ಸೆಯಲ್ಲಿ ಉಂಟಾಗುವ ತೊಡಕುಗಳು ಮತ್ತು ಅದರ ನಿವಾರಣೆಯ ಕುರಿತು ತಜ್ಞ ವೈದ್ಯರುಗಳು ಉಪನ್ಯಾಸ ನೀಡುತ್ತಾರೆ. ಈ ಸಮ್ಮೇಳನದಲ್ಲಿ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆಚಿಕಿತ್ಸಾ ತಜ್ಞರಾಗಿರುವ, ಫೂಟ್ ಅಂಡ್ ಆಂಕ್ಲ್ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಪಾದ ಮತ್ತು ಪಾದದ ಮಣಿಗಂಟು ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ, ಡಾ ಪ್ರತೀಕ್ಷ್. ಪಿ ಇವರು ಉಪನ್ಯಾಸ ನೀಡಿದರು. ಇವರು ಈಗಾಗಲೇ ಉಜಿರೆ ಎಸ್,ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಕ್ರಪಾದ ಹೊಂದಿರುವ, ನಡೆದಾಡಲು ಕಷ್ಟಪಡುತ್ತಿದ್ದ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಗು ಸ್ವತಂತ್ರವಾಗಿ ನಡೆದಾಡುವಂತೆ ಮಾಡುವ ಮೂಲಕ ಮಗುವಿನ ಪೋಷಕರಲ್ಲಿ ಸಂತೋಷ ತುಂಬಿದ ಇವರು ಡಾ| ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮೆಚ್ಚುಗೆ ಪಾತ್ರರಾಗಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ಡಾ ಪ್ರತೀಕ್ಷ್. ಪಿ ಇವರು ಈ ಸಮ್ಮೇಳನದಲ್ಲಿ ಪಾದದ ಮೂಳೆಗಳ ಮುರಿತದ ಗಾಯಗಳ ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಪ್ರಮುಖ ಉಪನ್ಯಾಸ ನೀಡಲು ಸಂಘದಿಂದ ಆಹ್ವಾನಿಸಲ್ಪಟ್ಟಿದ್ದರು. ಪಾದದ ಮಧ್ಯದಲ್ಲಿರುವ ಅನೇಕ ಕೀಲುಗಳ ಮತ್ತು ಮೂಳೆಗಳ ಮುರಿತದಿಂದ ಅಥವಾ ಮಧ್ಯದ ಪಾದವನ್ನು ಬೆಂಬಲಿಸುವ ಅಸ್ಥಿರಜ್ಜುಗಳು ಹರಿದು ಗಾಯ ಉಂಟಾಗುವುದು. ಮುಂದೆ ಇದೇ ಗಾಯಗಳು ಸಂಕೀರ್ಣ ಸಮಸ್ಯೆಯಾಗಿ ಬದಲಾಗುವುದು ಮತ್ತು ಇವುಗಳಿಗೆ ಇರುವ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳ ಬಗ್ಗೆ ಇವರು ಈ ಸಮ್ಮೇಳನದಲ್ಲಿ ಪ್ರಮುಖ ಮಹತ್ವದ ನೀಡಿದರು.


