ಮಂಗಳೂರು: ಕುದ್ರೋಳಿ ದೇವಸ್ಥಾನದಲ್ಲಿ ದಸರಾ ಹಿನ್ನೆಲೆ ಜನಜಂಗುಳಿ ಇರುವಾಗ ಆಟೋ ಚಾಲಕನೊಬ್ಬ ಮುಖ್ಯ ದ್ವಾರದ ಬಳಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾನೆಂದು ಆರೋಪಿಸಿ ಟ್ರಾಫಿಕ್ ಪೊಲೀಸರು ಆತನನ್ನು ತಡೆದು ದಂಡ ವಿಧಿಸಿದ್ದು ಸ್ಥಳದಲ್ಲಿ ಆಟೋ ಚಾಲಕರ ಆಕ್ರೋಶಕ್ಕೂ ಕಾರಣವಾಗಿ ಇದರ ವಿಡಿಯೋ ವೈರಲ್ ಆಗಿದೆ.

ಸೆ.24ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ಆಟೋ ಚಾಲಕ ಶೈಲೇಶ್ (28) ಎಂಬವರಿಗೆ ಪೊಲೀಸ್ ಸಿಬ್ಬಂದಿ ದಂಡ ವಿಧಿಸಿದ್ದಾರೆ. ಆದರೆ ಇದರಿಂದ ಸಿಟ್ಟಿಗೆದ್ದ ಆಟೋ ಚಾಲಕ 500 ರೂ. ಮಾಡಲು ಎಷ್ಟು ಕಷ್ಟ ಇದೆ ಗೊತ್ತಾ, ನೀವು ದಂಡ ಹಾಕ್ತಿರಿ, ನಾನು ಏನು ತಪ್ಪು ಮಾಡಿದ್ದೇನೆ, ನಿಮಗೆ ಏನೂ ತಪ್ಪು ಮಾತಾಡಿಲ್ಲ ಅಲ್ವಾ ಎಂದು ಹೇಳಿ ಒಂದು ಕೈಯಲ್ಲಿ ವಿಡಿಯೋ ಮಾಡುತ್ತ ಸಾಗಿದ್ದಾನೆ.
ಆದರೆ ಪೊಲೀಸ್ ಎಎಸ್‌ಐ ಒಬ್ಬರು, ಚಾಲಕನ ಸೊಂಟದ ಬೆಲ್ಟ್ ಹಿಡಿದು ನಿನ್ನನ್ನು ಬಿಡುವುದಿಲ್ಲ ಎನ್ನುತ್ತ ಹಿಡಿದುಕೊಂಡು ಹೋಗಿದ್ದಾರೆ.
ಈ ವೇಳೆ, ಇತರ ಆಟೋ ಚಾಲಕರು ಕೂಡ ಸೇರಿದ್ದು ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.



