ಬೆಂಗಳೂರು (ಅ.09) : ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರ ಸೆಟ್ ಅನ್ನು ಪರಿಸರ ನಿಯಮ ಉಲ್ಲಂಘನೆಯ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸೀಲ್ ಮಾಡಿದ ನಂತರ ಎದ್ದಿದ್ದ ವಿವಾದಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಅವರ ಮಧ್ಯಪ್ರವೇಶದಿಂದ ತಾತ್ಕಾಲಿಕ ವಿರಾಮ ಸಿಕ್ಕಿದೆ.

ಬಿಡದಿಯ ಜಾಲೀವುಡ್ ಸ್ಟುಡಿಯೋಸ್‌ನಲ್ಲಿರುವ BBK ಸೆಟ್ ಅನ್ನು ಅಕ್ಟೋಬರ್ 7 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಥಗಿತಗೊಳಿಸಿತ್ತು. ಸ್ಟುಡಿಯೋ ಆವರಣದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ (STP) ನಿಷ್ಕ್ರಿಯವಾಗಿದ್ದು, ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಮತ್ತು ನೀರು-ಗಾಳಿ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ ಎಂದು KSPCB ಅಧಿಕಾರಿಗಳು ಆಪಾದಿಸಿದ್ದರು. ಇದರಿಂದ ಸೆಟ್‌ನಲ್ಲಿದ್ದ ಎಲ್ಲ ಸ್ಪರ್ಧಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಡಿಸಿಎಂ ಮಧ್ಯಪ್ರವೇಶ
ಈ ಬಿಕ್ಕಟ್ಟು ಕನ್ನಡ ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ವಿವಾದವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರವೇಶಿಸಿದರು. ಬಿಡದಿಯ ಜಾಲೀವುಡ್ ಆವರಣದ ಸೀಲ್ ತೆಗೆಯಲು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಟ್ವೀಟ್ ಮೂಲಕ ಘೋಷಿಸಿದರು.

“ಪರಿಸರ ಅನುಸರಣೆ ನಮ್ಮ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ನಿಯಮಗಳ ಪ್ರಕಾರ ಉಲ್ಲಂಘನೆಗಳನ್ನು ಸರಿಪಡಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು. ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿದ್ದೇನೆ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಕಿಚ್ಚ ಸುದೀಪರ ಪ್ರತಿಕ್ರಿಯೆ
ಡಿ.ಕೆ. ಶಿವಕುಮಾರ್ ಅವರ ಈ ನಿರ್ಧಾರಕ್ಕೆ ಬಿಗ್ ಬಾಸ್ ಕನ್ನಡ 12 ರ ನಿರೂಪಕ ಹಾಗೂ ನಟ ಕಿಚ್ಚ ಸುದೀಪ ಅವರು ತಕ್ಷಣವೇ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದರು.
“ಸಕಾಲದಲ್ಲಿ ಬೆಂಬಲ ನೀಡಿದ ಮಾನ್ಯ ಡಿ.ಕೆ. ಶಿವಕುಮಾರ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಗೊಂದಲದಲ್ಲಿ #BBK ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಒಪ್ಪಿಕೊಂಡ ಅಧಿಕಾರಿಗಳಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಉಪಮುಖ್ಯಮಂತ್ರಿಗಳು ನನ್ನ ಕರೆಯನ್ನು ತಕ್ಷಣವೇ ಸ್ವೀಕರಿಸಿದ್ದಕ್ಕಾಗಿ ಮತ್ತು ನಳಪಾಡ್ ಅವರ ಪ್ರಯತ್ನಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. #BBK12 ಉಳಿಯಲಿದೆ,” ಎಂದು ಸುದೀಪ ತಿಳಿಸಿದರು.
ಸದ್ಯಕ್ಕೆ, ಜಿಲ್ಲಾಡಳಿತವು ಸ್ಟುಡಿಯೋಗೆ 10 ದಿನಗಳ ತಾತ್ಕಾಲಿಕ ಅನುಮತಿಯನ್ನು ನೀಡಿದೆ. ಈ ಅವಧಿಯಲ್ಲಿ ಸ್ಟುಡಿಯೋ ಎಲ್ಲ ಪರಿಸರ ನಿಯಮಗಳನ್ನು ಪಾಲಿಸಬೇಕಾಗಿದೆ. ಸಂಪೂರ್ಣ ಅನುಮತಿ ಸಿಗುವವರೆಗೆ BBK12 ರ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
