Tue. Oct 14th, 2025

ಮೈಸೂರು ದಸರಾದ ಕರಾಳ ನೆರಳು: ಬಲೂನ್ ಮಾರುತ್ತಿದ್ದ 10 ವರ್ಷದ ಬಾಲಕಿ ಕೊಲೆ, ಅತ್ಯಾಚಾರ ಶಂಕೆ!

ಮೈಸೂರು (ಅ.09) : ದಸರಾದಲ್ಲಿ ಬಲೂನ್ ಮಾರಾಟ ಮಾಡಲು ಬಂದಿದ್ದ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದ ಬಳಿ ಈ ಬಾಲಕಿಯ ಶವ ಪತ್ತೆಯಾಗಿರುವುದು ಪೊಲೀಸರು ಮತ್ತು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಕಲಬುರಗಿಯಿಂದ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ಡೇರೆ ಹಾಕಿಕೊಂಡು ನೆಲೆಸಿದ್ದರು. ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ತಂದೆ-ತಾಯಿಯೊಂದಿಗೆ ಮಲಗಿದ್ದ ಬಾಲಕಿ, ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ, ಆಕೆಯು ತಂಗಿದ್ದ ಡೇರೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಗುರುವಾರ (ಅಕ್ಟೋಬರ್ 09) ಮುಂಜಾನೆ 6:30ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ.

ಪತ್ತೆಯಾದ ಶವದ ಮೇಲೆ ಬಟ್ಟೆ ಸರಿಯಾಗಿ ಇಲ್ಲದ ಕಾರಣ, ಇದು ಕೇವಲ ಕೊಲೆಯಲ್ಲದೆ ಅತ್ಯಾಚಾರವೂ ನಡೆದಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಮತ್ತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪೈಶಾಚಿಕ ಕೃತ್ಯವು ದಸರಾ ಮುಕ್ತಾಯಗೊಳ್ಳುವ ಸಮಯದಲ್ಲಿ ನಡೆದಿದೆ. ಆಘಾತಕಾರಿ ಸಂಗತಿ ಎಂದರೆ, ಇದೇ ಸ್ಥಳದಲ್ಲಿ ಕೇವಲ ಎರಡು ದಿನಗಳ ಹಿಂದೆ ರೌಡಿಶೀಟರ್‌ನ ಸಹವರ್ತಿಯೊಬ್ಬನ ಬರ್ಬರ ಹತ್ಯೆಯೂ ನಡೆದಿತ್ತು. ಹೀಗಾಗಿ, ಒಂದೇ ಸ್ಥಳದಲ್ಲಿ ಅಲ್ಪಾವಧಿಯಲ್ಲಿ ನಡೆದ ಈ ಎರಡು ಕೊಲೆ ಪ್ರಕರಣಗಳು ಆತಂಕವನ್ನು ಸೃಷ್ಟಿಸಿವೆ.

ಘಟನೆ ವರದಿಯಾಗುತ್ತಿದ್ದಂತೆ ಮೈಸೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಸ್ಥಳಕ್ಕೆ ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಲಾಯಿತು ಮತ್ತು ವ್ಯಾಪಾರಕ್ಕಾಗಿ ಆಗಮಿಸಿದ್ದ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನು ಸಹ ವಿಚಾರಣೆಗೊಳಪಡಿಸಲಾಯಿತು. ಅಂತಿಮವಾಗಿ, ಪೊಲೀಸರು ವಿವಿಧ ಕಡೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕೊಲೆ ಆರೋಪಿಯ ಸುಳಿವು ಲಭ್ಯವಾಯಿತು.

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಕೊಲೆ ಆರೋಪಿಯನ್ನು ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಎಂದು ಗುರುತಿಸಲಾಗಿದೆ. ಈತ ಹಿಂದೆ ಒಂದು ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದನು. ಊರಿಗೆ ಹೋಗದೆ ಮದ್ಯ ಸೇವಿಸಿ ಸುತ್ತಾಡುತ್ತಿದ್ದ ಈತನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪೈಶಾಚಿಕ ಕೃತ್ಯದ ಆರೋಪಿಯನ್ನು ಹಿಡಿಯುವ ಮೂಲಕ ಮೈಸೂರು ಪೊಲೀಸರು ಶೀಘ್ರವೇ ಪ್ರಕರಣವನ್ನು ಭೇದಿಸಿದ್ದಾರೆ.

Leave a Reply

Your email address will not be published. Required fields are marked *