(ಅ.11) : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ಮದುವೆಯಾದ ಜೀವಂತ ಮಗಳಿಗೇ ತಂದೆಯೊಬ್ಬರು ಶ್ರಾದ್ಧ ಮತ್ತು ತಿಥಿ ಕಾರ್ಯ ನೆರವೇರಿಸಿ, ಇಡೀ ಗ್ರಾಮಕ್ಕೆ ತಿಥಿ ಊಟ ಹಾಕಿಸುವ ಮೂಲಕ ಆಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಮಗಳ ನಡೆಯಿಂದ ಆಘಾತಕ್ಕೊಳಗಾದ ತಂದೆ, ಆಕೆ ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಘೋಷಿಸಿ ಈ ಅಸಾಮಾನ್ಯ ನಿರ್ಧಾರ ತೆಗೆದುಕೊಂಡಿದ್ದಾರೆ.

ನಾಗರಾಳ ಗ್ರಾಮದ ಶಿವಗೌಡ ಪಾಟೀಲ್ ಎಂಬುವರ ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ಓಡಿಹೋದ ಯುವತಿಯು ಕೊನೆಯವಳು. ಈ ಯುವತಿ ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬುವವರನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಪ್ರೀತಿಗೆ ಪೋಷಕರ ಒಪ್ಪಿಗೆ ಇರಲಿಲ್ಲ. ಪೋಷಕರ ವಿರೋಧದ ನಡುವೆಯೂ ಯುವತಿ ವಿಠ್ಠಲ್ ಜತೆ ಪರಾರಿಯಾಗಿದ್ದಳು. ಮಗಳು ಕಾಣೆಯಾದಾಗ ಮೊದಲು ಶಿವಗೌಡರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.

ಮಗಳು ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿರುವ ವಿಷಯ ತಿಳಿದ ಕೂಡಲೇ ಶಿವಗೌಡ ಪಾಟೀಲ್ ತೀವ್ರ ಮನನೊಂದಿದ್ದಾರೆ. ಮಗಳು ಮನೆತನದ ಸಂಸ್ಕಾರವನ್ನು ಮುರಿದು ನಡೆದುಕೊಂಡಿದ್ದಾಳೆ ಎಂಬ ಆಕ್ರೋಶದಿಂದ, ಆಕೆ ತಮ್ಮ ಪಾಲಿಗೆ ಇನ್ನು ಮುಂದೆ ಇಲ್ಲ ಎಂದು ಭಾವಿಸಿದರು. ಹೀಗಾಗಿ, ಅವರು ಮಗಳು ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಘೋಷಿಸಿ, ಸಾಂಪ್ರದಾಯಿಕವಾಗಿ ಆಕೆಯ ‘ಶ್ರಾದ್ಧ’ ಮಾಡಿ ಕರುಳ ಬಳ್ಳಿ ಸಂಬಂಧವನ್ನು ಶಾಶ್ವತವಾಗಿ ಕತ್ತರಿಸಿಕೊಳ್ಳಲು ನಿರ್ಧರಿಸಿದರು.

ಈ ಅಸಮಾನ್ಯ ನಿರ್ಧಾರದಂತೆ, ಶಿವಗೌಡ ಪಾಟೀಲ್ ಅವರು ಮಗಳ ಶ್ರಾದ್ಧ ಕಾರ್ಯವನ್ನು ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂಧು-ಬಳಗ, ಸಂಬಂಧಿಕರು ಮಾತ್ರವಲ್ಲದೆ ಇಡೀ ನಾಗರಾಳ ಗ್ರಾಮದ ಜನರನ್ನು ಆಹ್ವಾನಿಸಿ ವಿಧ್ಯುಕ್ತವಾಗಿ ಭೋಜನವನ್ನು ಏರ್ಪಡಿಸಲಾಗಿತ್ತು. ಬದುಕುಳಿದ ಮಗಳಿಗೆ ತಿಥಿ ಊಟ ಹಾಕಿಸಿದ ಈ ಘಟನೆ, ಪೋಷಕರ ಇಚ್ಛೆಗೆ ವಿರುದ್ಧವಾಗಿ ನಡೆಯುವ ಮಕ್ಕಳ ಬಗ್ಗೆ ತಂದೆಯೊಬ್ಬರು ವ್ಯಕ್ತಪಡಿಸಿದ ಆಕ್ರೋಶ ಮತ್ತು ಹತಾಶೆಯ ಪ್ರತಿರೂಪವಾಗಿ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಮನಸ್ಸಿನ ನೋವು ಮತ್ತು ಆಕ್ರೋಶವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಶಿವಗೌಡರು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಆಕೆಯ ಫೋಟೋದೊಂದಿಗೆ “ಶ್ರದ್ಧಾಂಜಲಿ” ಬ್ಯಾನರ್ಗಳನ್ನು ಗ್ರಾಮದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹಾಕಿಸಿದ್ದಾರೆ. ಈ ಮೂಲಕ ಮಗಳೊಂದಿಗಿನ ಎಲ್ಲ ಸಂಬಂಧವನ್ನು ಸಾರ್ವಜನಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಅಂತ್ಯಗೊಳಿಸಿ, ಮಗಳ ಈ ನಿರ್ಧಾರವು ಕುಟುಂಬದ ಪಾಲಿಗೆ ಎಷ್ಟು ನೋವುಂಟು ಮಾಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
