ಭುವನೇಶ್ವರ (ಅ.13) : ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ಆಯೋಜಿಸಿದ್ದ 40ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ 2025 (40th National Junior Athletics Championships 2025) ಒಡಿಶಾದ ಭುವನೇಶ್ವರದಲ್ಲಿ ಮುಕ್ತಾಯಗೊಂಡಿದ್ದು, ಈ ಮಹತ್ವದ ಕ್ರೀಡಾಕೂಟದಲ್ಲಿ ಮರೋಡಿಯ ಕ್ರೀಡಾಪಟು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಪುರುಷರ ಅಂಡರ್-20 (U-20) ವಿಭಾಗದ 4×100 ಮೀಟರ್ ರಿಲೇ ಫೈನಲ್ಸ್‌ನಲ್ಲಿ ಕರ್ನಾಟಕ ತಂಡವು ಅತ್ಯಂತ ರೋಚಕ ಪ್ರದರ್ಶನ ನೀಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.

41.71 ಸೆಕೆಂಡುಗಳ ಅತ್ಯುತ್ತಮ ಸಮಯದೊಂದಿಗೆ ಕರ್ನಾಟಕ ತಂಡ ಅಗ್ರಸ್ಥಾನ ಗಳಿಸಿತು.

ಈ ವಿಜೇತ ರಿಲೇ ತಂಡದಲ್ಲಿ ರಾಜ್ಯವನ್ನು ಪ್ರತಿನಿಧಿಸಿದವರಲ್ಲಿ ಮರೋಡಿ ಪಲಾರಗೋಳಿಯ ಪ್ರತಿಭಾನ್ವಿತ ವಿದ್ಯಾರ್ಥಿ ಸರ್ವಜೀತ್ ಅವರೂ ಒಬ್ಬರಾಗಿದ್ದಾರೆ.

ತಂಡದ ಒಟ್ಟಾರೆ ಪ್ರಯತ್ನ ಮತ್ತು ಸರ್ವಜೀತ್ ಅವರ ಅತ್ಯುತ್ತಮ ವೇಗದ ಪ್ರದರ್ಶನದ ಫಲವಾಗಿ ಕರ್ನಾಟಕ ಈ ಗೆಲುವನ್ನು ಸಾಧಿಸಿತು. ತಮಿಳುನಾಡು ತಂಡವು 41.73 ಸೆಕೆಂಡುಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಪಂಜಾಬ್ ಕಂಚಿನ ಪದಕ ಗಳಿಸಿತು.
