ಹೊಸದಿಲ್ಲಿ (ಅ.15) : ಕೇಂದ್ರ ಸರ್ಕಾರವು ದೇಶದ ಬ್ಯಾಂಕಿಂಗ್ ವಲಯದಲ್ಲಿ ಮತ್ತೊಂದು ಸುತ್ತಿನ ಬೃಹತ್ ಸುಧಾರಣೆಗೆ ಮುಂದಾಗಿದೆ. ಸಣ್ಣ ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು (PSB) ಆರ್ಥಿಕವಾಗಿ ಬಲಿಷ್ಠವಾಗಿರುವ ದೈತ್ಯ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಿ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದರ ಜೊತೆಗೆ, ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಸರ್ಕಾರಿ ಬ್ಯಾಂಕ್ಗಳನ್ನು ಜಾಗತಿಕ ಮಟ್ಟದಲ್ಲಿ ಸಜ್ಜುಗೊಳಿಸುವುದು ಈ ವಿಲೀನದ ಮುಖ್ಯ ಉದ್ದೇಶವಾಗಿದೆ.

2027ರೊಳಗೆ ವಿಲೀನ ಗುರಿ ಕೇಂದ್ರದ ಉನ್ನತ ಮೂಲಗಳ ಪ್ರಕಾರ, 2027ರೊಳಗೆ ಈ ಮೆಗಾ ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದರಿಂದಾಗಿ ದೇಶದಲ್ಲಿ ಕೇವಲ ಕೆಲವೇ ಕೆಲವು ಆರ್ಥಿಕವಾಗಿ ಬಲಿಷ್ಠವಾದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮಾತ್ರ ಉಳಿಯಲಿವೆ.

ಈ ಬಾರಿ ವಿಲೀನವಾಗುವ ಸಂಭವನೀಯ ಬ್ಯಾಂಕ್ಗಳು: ವರದಿಗಳ ಪ್ರಕಾರ, ಕೆಳಗಿನ ನಾಲ್ಕು ಸಣ್ಣ ಬ್ಯಾಂಕ್ಗಳನ್ನು ಇತರ ದೊಡ್ಡ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆ ಸಿದ್ಧವಾಗಿದೆ:
- ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB)
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI)
- ಬ್ಯಾಂಕ್ ಆಫ್ ಇಂಡಿಯಾ (BOI)
- ಬ್ಯಾಂಕ್ ಆಫ್ ಮಹಾರಾಷ್ಟ್ರ (BOM)

ಈ ಬ್ಯಾಂಕ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಬ್ಯಾಂಕ್ ಆಫ್ ಬರೋಡಾ (BOB) ನಂತಹ ದೈತ್ಯ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ.

ನೀತಿ ಆಯೋಗದ ಶಿಫಾರಸುಗಳ ಆಧಾರ: ಈ ವಿಲೀನ ಪ್ರಸ್ತಾವನೆಯು ನೀತಿ ಆಯೋಗದ ಹಿಂದಿನ ಶಿಫಾರಸುಗಳನ್ನು ಆಧರಿಸಿದೆ. ಎಸ್ಬಿಐ, ಪಿಎನ್ಬಿ, ಬಿಒಬಿ ಮತ್ತು ಕೆನರಾ ಬ್ಯಾಂಕ್ನಂತಹ ಕೆಲವೇ ದೊಡ್ಡ ಸರ್ಕಾರಿ ಬ್ಯಾಂಕ್ಗಳನ್ನು ಮಾತ್ರ ಉಳಿಸಿಕೊಂಡು, ಉಳಿದ ಸಣ್ಣ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಅಥವಾ ವಿಲೀನಗೊಳಿಸಲು ಆಯೋಗವು ಸಲಹೆ ನೀಡಿತ್ತು. ಅಂತಿಮ ನಿರ್ಧಾರವನ್ನು ಸಂಪುಟ ಸಭೆ ಮತ್ತು ಪ್ರಧಾನ ಮಂತ್ರಿ ಕಚೇರಿ (PMO) ಪರಿಶೀಲನೆಯ ನಂತರ, ಸಂಬಂಧಪಟ್ಟ ಬ್ಯಾಂಕ್ಗಳ ಅಭಿಪ್ರಾಯಗಳನ್ನು ಪಡೆದು ಘೋಷಿಸುವ ಸಾಧ್ಯತೆ ಇದೆ.
