ಉಜಿರೆ: (ಅ.21) ಬೆಳ್ತಂಗಡಿ ತಾಲೂಕಿನ ಜನಮಾನಸದಲ್ಲಿ ನೆಲೆಯಾಗಿರುವ ಅತ್ಯಂತ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ 46 ವರ್ಷಗಳಿಂದ ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದ ಹಿರಿಯ ವಿದ್ಯಾರ್ಥಿಗಳನ್ನು ಒಂದುಗೂಡಿಸುವುದಕ್ಕಾಗಿ ಅನುಗ್ರಹ ಸಮಾಗಮ ಸಮಾರಂಭವನ್ನು ದಿ 19/10/ 25ರಂದು ಅನುಗ್ರಹ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: ⭕ಉಳ್ಳಾಲ: ಮಲತಂದೆಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ – ಆರೋಪಿ ಬಂಧನ
ಈ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಲಕ್ಕಿಗೇಮ್ಸ್ ಗಳನ್ನು ನಡೆಸಲಾಯಿತು. ಸಭಾಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಶಾಲೆಯ ಆಕರ್ಷಕ ಬ್ಯಾಂಡ್ ಸೆಟ್ ಹಾಗೂ ಪೂರ್ಣ ಕುಂಭಕಲಶದ ಜೊತೆ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂ ಫಾ ಅಬೆಲ್ ಲೋಬೊ ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೆಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ನೆರವೇರಿಸಿ, ಅನುಗ್ರಹ ಶಿಕ್ಷಣ ಸಂಸ್ಥೆಯು ಶಿಸ್ತು ಗುಣಮಟ್ಟ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದರಿಂದ ತಾಲೂಕಿನಲ್ಲಿ ಹೆಮ್ಮೆಯ ಶಿಕ್ಷಣ ಸಂಸ್ಥೆ ಎಂದು ಹೆಸರು ಪಡೆದಿದೆ ಎಂದು ಹೆಮ್ಮೆಯ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾದ ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಲ್ಲಿ ಓರ್ವರಾದ ಹಾಗೂ ತುಮಕೂರು ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಶ್ರೀ ಜಯಪ್ರಕಾಶ್ ಅವರು ಮಾತನಾಡುತ್ತಾ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಅತ್ಯುನ್ನತ ಶ್ರೇಣಿ ಗಳಿಸಲು ಈ ವಿದ್ಯಾಸಂಸ್ಥೆಯಿಂದ ಸಾಧ್ಯವಾಗುತ್ತಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಹಾಗೆಯೇ ಇನ್ನೋರ್ವ ಹಿರಿಯ ವಿದ್ಯಾರ್ಥಿನಿಯಾದ ಶ್ರೀಮತಿ ಪ್ರಿತೀತ ಬಂಗೇರ ಅವರು ಈ ಸಂಸ್ಥೆಯು ನನ್ನ ಮಾತೃ ಸಂಸ್ಥೆಯಾಗಿದೆ ಈ ಹಂತಕ್ಕೆ ಬರಲು ವೇದಿಕೆಯಲ್ಲಿ ಮಾತನಾಡಲು ಈ ಶಿಕ್ಷಣ ಸಂಸ್ಥೆಯಿಂದ ಪಡೆದ ಶಿಸ್ತು ಜ್ಞಾನ ಹಾಗೂ ಮೌಲ್ಯಗಳಿಂದ ಕಾರಣವಾಗಿದೆ ಎಂದು ಹೇಳುತ್ತಾ ನಾನು ಈ ಸಂಸ್ಥೆಯ ಸಕ್ರಿಯ ಸದಸ್ಯಯಾಗುತ್ತೇನೆಂದು ಆಶ್ವಾಸನೆ ನೀಡಿದರು. ಮುಖ್ಯ ಅತಿಥಿಗಳಾದ ಡಾ. ಶಾಲ್ಮಲಿ, ಮೋನಿಕಾ ಡಿಸೋಜ, ಜೋಶಲ್ ಸ್ವೀಡಾ, ಮಹಮ್ಮದ್ ಅಯಾಜ್ ಇವರುಗಳು ಕೂಡ ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಸಂಚಾಲಕರಾದ ಫಾ ಅಬೆಲ್ ಲೋಬೊ ಮಾತನಾಡುತ್ತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಹಳೆಯ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಮುಂದೆ ತಮ್ಮ ಸಹಕಾರವನ್ನು ಬಯಸುವುದಾಗಿ ಕೇಳಿಕೊಂಡರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಆ್ಯಂಟನಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಪ್ರಿತೀತ ಬಂಗೇರ, ಉಪಾಧ್ಯಕ್ಷರುಗಳಾಗಿ ಶ್ರೀ ವಿವೇಕ್ ಡೊಮಿನಿಕ್ ಡಿಸೋಜಾ ಹಾಗೂ ಶ್ರೀಮತಿ ಮಾನಸ ಬಿ, ಕಾರ್ಯದರ್ಶಿಯಾಗಿ ಮೋನಿಕ ನಿಯೋಲಫರ್ ಡಿಸೋಜಾ ಜೊತೆಕಾರ್ಯದರ್ಶಿಯಾಗಿ ಶ್ರೀ ದುರ್ಗಾದಾಸ್ ಕೋಶಾಧಿಕಾರಿಗಳಾಗಿ ಸ್ಮಿತಾ ಫೆರ್ನಾಂಡಿಸ್ ಹಾಗೂ ಅರೆನ್ಸ್ಟನ್ ಡಿಸೋಜಾ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭಾ ಕಾರ್ಯಕ್ರಮದ ನಂತರ ಹಳೇ ವಿದ್ಯಾರ್ಥಿಗಳಿಂದ ಆಕರ್ಷಕ ಮನೋರಂಜನ ಕಾರ್ಯಕ್ರಮವು ನಡೆಯಿತು. ನಂತರ ಎಲ್ಲರಿಗೂ ಶುಚಿ ರುಚಿಯಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಾಂಶುಪಾಲರಾದ ವಂ ಫಾ ವಿಜಯ್ ಲೋಬೊ ಸ್ವಾಗತಿಸಿ ದೈಹಿಕ ಶಿಕ್ಷಕರಾದ ವಸಂತ ಹೆಗ್ಡೆ ವಂದಿಸಿ ನೆಲ್ಸನ್ ಮೊನಿಸ್ ಕಾರ್ಯಕ್ರಮ ನಿರೂಪಿಸಿದರು.


