ಚಿಕ್ಕಮಗಳೂರು (ಅ. 27): ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇ ಸ್ನಾನದ ಗೃಹದಲ್ಲಿ ಯುವತಿ ಅನುಮಾನಾಸ್ಪದ ಸಾವು ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಹೃದಯಾಘಾತದಿಂದ ವ್ಯಕ್ತಿ ನಿಧನ
ಹೋಂ ಸ್ಟೇಗೆ ಲೈಸೆನ್ಸ್ ಇಲ್ಲ ಎಂಬುದು ಒಂದೆಡೆಯಾದರೆ, ಇಲ್ಲಿ ವಾಸ್ತವ್ಯ ಮಾಡಿದವರ ಮಾಹಿತಿ ಕೂಡ ನಿಗೂಢವಾಗಿರುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸ್ನೇಹಿತೆ ಎಂಗೇಜ್ಮೆಂಟ್ಗಾಗಿ ಬೆಂಗಳೂರಿನಿಂದ ಬಂದಿದ್ದ ರಂಜಿತಾ ಮತ್ತು ರೇಖಾ ಹೋಂ ಸ್ಟೇನಲ್ಲಿ ರೂಂ ಪಡೆದಿದ್ದರು. ಆ ಬಳಿಕ ಸ್ನಾನದ ಗೃಹದಲ್ಲಿ ರಂಜಿತಾ (27) ಅನುಮಾನಾಸ್ಪದ ಸಾವನ್ನಪ್ಪಿದ್ದರು.

ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ರಂಜಿತಾ, ರೇಖಾ ಜೊತೆಗೂಡಿ ಎರಡು ದಿನಗಳವರೆಗೂ ಹೋಂಸ್ಟೇನಲ್ಲಿ ರೂಮ್ ಪಡೆದಿದ್ದರು. ಅಂದು ಸಂಜೆ ಫಾಸ್ಟ್ಫುಡ್ ಅಂಗಡಿಯಲ್ಲಿ ಇಬ್ಬರೂ ಸಮಯ ಕಳೆದಿದ್ದು, ಬಳಿಕ ಸ್ಕೂಟಿಯಲ್ಲಿ ರಂಜಿತಾ ಮತ್ತು ರೇಖಾ ಹೋಂ ಸ್ಟೇಗೆ ಬಂದಿದ್ದರು ಎನ್ನಲಾಗಿದೆ.

ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ರಂಜಿತಾರ ಮರಣೋತ್ತರ ಪರೀಕ್ಷೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ಪೋಷಕರು ನೀಡಿದ ದೂರಿನ ಅನ್ವಯ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಸಾವಿನ ಹಿಂದೆ ನೂರಾರು ಅನುಮಾನಗಳು ಶುರುವಾಗಿದ್ದು, ಹೋಂ ಸ್ಟೇನಲ್ಲಿರುವ ಸಿಸಿ ಕ್ಯಾಮರಾಗಳೂ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ವಿಷಯ ಗೊತ್ತಾಗಿದೆ.



