Shreyas Iyer: ಕ್ರಿಕೆಟ್ ಆಟಗಾರ, ಟೀಂ ಇಂಡಿಯಾದ ಏಕದಿನ ಪಂದ್ಯಗಳ ಉಪನಾಯಕ ಶ್ರೇಯಸ್ ಅಯ್ಯರ್ ಆರೋಗ್ಯದ ಬಗ್ಗೆ ಸಮಾಧಾನಕರ ಸಂಗತಿ ಹೊರಬಿದ್ದಿದೆ. ಸಿಡ್ನಿಯಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಹೋಗಿ, ಬಿದ್ದು ಗಂಭೀರವಾಗಿ ಏಟು ಮಾಡಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರನ್ನ ಸದ್ಯ ಐಸಿಯುದಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಶ್ರೇಯಸ್ ಅಯ್ಯರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಿಧಾನಕ್ಕೆ ಚೇತರಿಕೆ ಕಾಣುತ್ತಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ: 🌀ರಾಜ್ಯದ ಹವಾಮಾನ ವರದಿ
ಅ.25ರಂದು ಶ್ರೇಯಸ್ ಅಯ್ಯರ್‌ಗೆ ಗಂಭೀರ ಏಟು ಬಿದ್ದಿತ್ತು. ಆಸ್ಟ್ರೇಲಿಯಾದ ಬ್ಯಾಟರ್ ಅಲೆಕ್ಸ್ ಕ್ಯಾರಿ ಅವರ ಕ್ಯಾಚ್‌ನ್ನ ಅದ್ಭುತವಾಗಿ ಹಿಡಿದರು. ಪೂರ್ಣವಾಗಿ ಡೈವ್ ಮಾಡಿದರು. ಆದರೆ ಅದಾದ ಮೇಲೆ ಶ್ರೇಯಸ್‌ಗೆ ಪೆಟ್ಟುಬಿದ್ದಿತ್ತು. ನೋವಲ್ಲಿ ನರಳಾಡಿದರು. ಕೂಡಲೇ ಡ್ರೆಸ್ಸಿಂಗ್ ರೂಮ್‌ಗೆ ಹೋದರು. ಆಮೇಲೆ ಅವರನ್ನ ಆಸ್ಪತ್ರೆಗೆ ದಾಖಲಿಸಿ, ಸ್ಕ್ಯಾನ್ ಮಾಡಲಾಗಿತ್ತು. ಅದರಲ್ಲಿ ಆತಂಕಕಾರಿ ಸಂಗತಿ ಗೊತ್ತಾಗಿತ್ತು. ಶ್ರೇಯಸ್ ಅಯ್ಯರ್ ಅವರ ಸ್ಪ್ಲೀನ್ (ಗುಲ್ಮ)ಗೆ ಬಲವಾದ ಹೊಡೆತ ಬಿದ್ದು, ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಿತ್ತು. ಇದು ಗಂಭೀರ ಪರಿಸ್ಥಿತಿಯೇ ಆಗಿದ್ದರಿಂದ ಶ್ರೇಯಸ್ ಅಯ್ಯರ್ ಅವರನ್ನ ಐಸಿಯುಗೆ ಶಿಫ್ಟ್ ಮಾಡಿ, ಚಿಕಿತ್ಸೆ ನೀಡಲಾಗಿತ್ತು.



ಇದೀಗ ಹೊರಬಿದ್ದ ವರದಿಯ ಪ್ರಕಾರ ಶ್ರೇಯಸ್ ಅಯ್ಯರ್ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನ ವಾರ್ಡ್‌ಗೆ ಶಿಫ್ಟ್ ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ. ಶ್ರೇಯಸ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಕೂಡ ತಿಳಿಸಿದೆ. ಇನ್ನು ಟೀಂ ಇಂಡಿಯಾದ ಟ್ರಾವೆಲಿಂಗ್ ವೈದ್ಯ ಡಾ. ರಿಜ್ವಾನ್ ಖಾನ್ ಅವರು ಶ್ರೇಯಸ್ ಅಯ್ಯರ್ ಜೊತೆಗೇ ಇದ್ದಾರೆ. ಸಿಡ್ನಿ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಉಳಿದ ಆಟಗಾರರು ಅಕ್ಟೋಬರ್ 29ರಿಂದ ಆರಂಭವಾಗುವ ಟಿ20 ಸರಣಿಗಾಗಿ ಕ್ಯಾನ್‌ಬೆರಾಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಶ್ರೇಯಸ್ ಅಯ್ಯರ್ ಅವರ ಪಾಲಕರು ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಬರಲಿದ್ದಾರೆ.
ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುತ್ತಿದ್ದರೂ, ಅವರಿಗೆ ತುಂಬ ದಿನಗಳವರೆಗೆ ವಿಶ್ರಾಂತಿ ಅಗತ್ಯವಿರುತ್ತದೆ. ನವೆಂಬರ್ ಅಂತ್ಯ ಮತ್ತು ಡಿಸೆಂಬರ್ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಪಂದ್ಯದಲ್ಲಿ ಶ್ರೇಯಸ್ ಆಡಲು ಸಾಧ್ಯವಿಲ್ಲ. ಹಾಗೇ, ಶ್ರೇಯಸ್ ಅಯ್ಯರ್ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ. ಅವರು ಪೂರ್ಣವಾಗಿ ಚೇತರಿಸಿಕೊಂಡೇ ವಾಪಸ್ ಆಟಕ್ಕೆ ಮರಳಲಿ ಎಂದು ಬಿಸಿಸಿಐ ತಿಳಿಸಿದೆ. ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶಗಳೇ ಕಡಿಮೆ ಸಿಗುತ್ತಿವೆ. ಇತ್ತೀಚೆಗೆ ಅವರು ಏಕದಿನ ಪಂದ್ಯಕ್ಕೆ ಮರಳಿದ್ದು, ಮತ್ತೆ ಫಾರ್ಮ್‌ಗೆ ಬರಲು ಒಂದು ಚಾನ್ಸ್ ಸಿಕ್ಕಿತ್ತು. ಆದರೆ ಅಷ್ಟರಲ್ಲಿ ದುರದೃಷ್ಟವೆಂಬಂತೆ ಏಟು ಮಾಡಿಕೊಂಡರು. ಇತ್ತೀಚೆಗೆ ಬೆನ್ನುನೋವಿನಿಂದ ಚೇತರಿಸಿಕೊಂಡು, ತಂಡಕ್ಕೆ ಮರಳಿದ್ದ ಶ್ರೇಯಸ್ ಅಯ್ಯರ್, ಇದೀಗ ಮತ್ತಷ್ಟು ತಿಂಗಳುಗಳ ಕಾಲ ರೆಸ್ಟ್ ಮಾಡಬೇಕಾಗಿದೆ.


