Wed. Nov 5th, 2025

Mangaluru: ದಾಂಪತ್ಯ ಕಲಹ – ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಂದೆ , ಪುಟ್ಟ ಮಗಳನ್ನು ರಕ್ಷಿಸಿದ ಪೋಲಿಸರು

ಮಂಗಳೂರು(ನ.5) : ದಾಂಪತ್ಯ ಕಲಹದಿಂದ ನೊಂದು ಮಗಳ ಜತೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಂದೆಯನ್ನು ನಗರದ ಪಣಂಬೂರು ಪೊಲೀಸರು ರಕ್ಷಿಸಿದ್ದಾರೆ. ಕಾವೂರು ಶಾಂತಿನಗರದ ವ್ಯಕ್ತಿಯೊಬ್ಬ ಪಣಂಬೂರು ಬೀಚ್ ಬಳಿ ಪುಟ್ಟ ಮಗಳ ಜತೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ. ಆದರೆ ಸುತ್ತಮುತ್ತಲು ಜನ, ಪೊಲೀಸರು ಇರುವುದನ್ನು ಗಮನಿಸಿ ಆತ ಮನೆಗೆ ತೆರಳಿದ.

ಇದನ್ನೂ ಓದಿ: 🔴ಮಂಗಳೂರು: ಮಾಜಿ ಕ್ರಿಕೆಟ್ ಆಟಗಾರ, ಬಿಸಿಸಿಐ ಕೋಶಾಧಿಕಾರಿ ರಘುರಾಮ್ ಭಟ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ

ಸಂಶಯದಿಂದ ಮನೆಗೆ ತೆರಳಿದ ಪಣಂಬೂರು ಪೊಲೀಸರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತಂದೆ ಮತ್ತು ಮಗಳನ್ನು ರಕ್ಷಿಸಿದ್ದಾರೆ.
ಹೆಂಡತಿಯ ಜತೆ ಜಗಳ ನಡೆದು ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಅಲಿಯಾಸ್ ಸಂತು (35) ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜತೆಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದ. ಈತ ಬಜ್ಜೆಯ ಯುವತಿಯನ್ನು ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಇವರಿಗೆ ನಾಲ್ಕು ವರ್ಷದ ಹೆಣ್ಣು ಮಗು ಇದೆ.

ಇತ್ತೀಚೆಗೆ ಪತ್ನಿಯ ಬಗ್ಗೆ ರಾಜೇಶ್‌ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಪತಿ-ಪತ್ನಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಪತ್ನಿ ಸರಿಯಿಲ್ಲ ಎಂದು ಪತಿ ರಾಜೇಶ್ ಸೋಮವಾರ ಸಂಜೆ ತನ್ನ ಮಗಳನ್ನು ಕರೆದುಕೊಂಡು ಬೀಚ್‌ಗೆ ಹೋಗಿದ್ದು, ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ, ನಿನ್ನ ತಾಯಿ ಸರಿ ಇಲ್ಲ. ನಮಗೆ ಯಾರೂ ಬೇಡ ಎನ್ನುತ್ತ ನೀರಿನತ್ತ ನಡೆಯುವ ರೀತಿ ತುಳುವಿನಲ್ಲಿ ಮಾತನಾಡುತ್ತಾ ವಿಡಿಯೊ ಮಾಡಿದ್ದಾನೆ. ಅಲ್ಲದೆ, ವಿಡಿಯೊವನ್ನು ಸಂಬಂಧಿಕರಿಗೆ ಹಾಕಿದ್ದಾನೆ. ವಿಡಿಯೊ ಕ್ಷಣಾರ್ಧದಲ್ಲಿ ವಾಟ್ಸಾಪ್‌ನಲ್ಲಿ ಶೇರ್ ಆಗಿದ್ದು, ಏಳು ಗಂಟೆ ವೇಳೆಗೆ ಪಣಂಬೂರು ಪೊಲೀಸರಿಗೆ ತಲುಪಿತ್ತು.

ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ವಿಡಿಯೋವನ್ನು ನೋಡಿ, ತಣ್ಣೀರುಬಾವಿ ಆಗಿರಬೇಕೆಂದು ಸಿಬಂದಿಯನ್ನು ಹುಡುಕಲು ಕಳುಹಿಸಿದ್ದಾರೆ. ಅಲ್ಲಿ ಹುಡುಕಿದಾಗಲೂ ಯಾರೂ ಇರಲಿಲ್ಲ. ಆದರೆ ಮಗುವಿನ ಜತೆಗೆ ಒಬ್ಬಾತ ಬಂದಿದ್ದು ನಿಜ ಎಂಬುವುದು ಗೊತ್ತಾಗಿದೆ.

ಸೈಬ‌ರ್ ಪೊಲೀಸ್‌ ಸಹಾಯ ಪಡೆದು ಆತನ ನಂಬರ್ ಟ್ರೇಸ್ ಮಾಡಿ ಲೊಕೇಶನ್ ನೋಡಿದಾಗ, ಕಾವೂರು ಶಾಂತಿನಗರ ತೋರಿಸಿತ್ತು. ಕೂಡಲೇ ಕಾವೂರು ಠಾಣೆಗೆ ತಿಳಿಸಿ, ಪಣಂಬೂರು ಠಾಣೆಯ ಇನ್ನೊಂದು ತಂಡವನ್ನು ಆ ಜಾಗಕ್ಕೆ ಇನ್ಸ್‌ಪೆಕ್ಟರ್ ಸಲೀಂ ಕಳಿಸಿಕೊಟ್ಟಿದ್ದರು. ಫಕೀರಪ್ಪ ಶರಣಪ್ಪ, ರಾಕೇಶ್ ಸೇರಿ ಪಣಂಬೂರು ಪೊಲೀಸರು ಹತ್ತು ನಿಮಿಷದಲ್ಲಿ ಅಲ್ಲಿಗೆ ತಲುಪಿ ಮನೆ ಪತ್ತೆ ಮಾಡಿದ್ದರು. ಮನೆಗೆ ಬಾಗಿಲು ಹಾಕಿದ್ದರಿಂದ ಹೊರಗಿನಿಂದ ಬಡಿದರೂ ಸ್ಪಂದನೆ ಬರಲಿಲ್ಲ. ಹೀಗಾಗಿ ಇನ್ಸ್‌ಪೆಕ್ಟರ್ ಸೂಚನೆಯಂತೆ, ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದು ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜತೆಗೆ ನೇಣಿಗೆ ಶರಣಾಗಲು ರೆಡಿ ಮಾಡಿಕೊಳ್ಳುತ್ತಿದ್ದ.

ಪೊಲೀಸರು ಕೂಡಲೇ ಅವರನ್ನು ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ನಿಮಿಷ ತಡವಾದರೂ ಪ್ರಾಣ ಹೋಗುತ್ತಿತ್ತು ಎನ್ನಲಾಗಿದೆ.ಮಂಗಳವಾರ ಗಂಡ- ಹೆಂಡತಿ ಇಬ್ಬರನ್ನೂ ಕರೆಸಿ ಪೊಲೀಸರು ಬುದ್ದಿವಾದ ಹೇಳಿ ಮಾತುಕತೆ ನಡೆಸಿದ್ದಾರೆ. ಆದರೆ ಆತನೊಂದಿಗೆ ಇರುವುದಕ್ಕೆ ಪತ್ನಿ ಒಪ್ಪಲಿಲ್ಲ. ತನಗೆ ಸಾಕಾಗಿ ಹೋಗಿದೆ, ಬೇರೆಯಾಗಿ ಇರುತ್ತೇವೆ, ಡೈವರ್ಸ್ ಕೊಡುತ್ತೇನೆ. ಮಗುವನ್ನು ತಾನೇ ಸಾಕುತ್ತೇನೆ ಎಂದು ಹೇಳಿದ್ದಾಳೆ. ಡೈವರ್ಸ್ ಕೊಟ್ಟು ಬೇರೆಯಾಗಿಯೇ ಇರಿ, ಯಾಕೆ ಸಾಯ್ತೀರಿ ಎಂದು ಪೊಲೀಸರು ಬುದ್ಧಿ ಹೇಳಿದ್ದಾರೆ. ಗಂಡ ರಾಜೇಶ್ ಒಟ್ಟಿಗೆ ಬಾಳ್ತೀವಿ ಎಂದರೂ ಹೆಂಡತಿ ಕೇಳಲಿಲ್ಲ. ಬಳಿಕ ಇಬ್ಬರನ್ನೂ ಕಳಿಸಿಕೊಟ್ಟಿದ್ದಾರೆ. ಆತ್ಮಹತ್ಯೆ ಯತ್ನದ ಬಗ್ಗೆ ಹಿಂದೆ ಕೇಸ್‌ ದಾಖಲಿಸಲು ಅವಕಾಶ ಇತ್ತು. ಈಗ ಬಿಎನ್‌ಎಸ್ ಸೆಕ್ಷನ್ 309 ತೆಗೆದು ಹಾಕಿದ್ದರಿಂದ ಹಾಗೇ ಬಿಟ್ಟು ಕಳುಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *