Wed. Nov 19th, 2025

ಉಜಿರೆ : ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳರೋಗ ತಪಾಸಣಾ ಶಿಬಿರ

ಉಜಿರೆ : ಉಜಿರೆ ಎಸ್. ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ, ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉಜಿರೆಯ ಹಿರಿಯ ವೈದ್ಯರಾದ ಡಾ| ಕೆ. ನರಸಿಂಹ ಶೆಣೈ ಉದ್ಘಾಟಿಸಿದರು.

ಇದನ್ನೂ ಓದಿ: 🔰ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ

ಬಳಿಕ ಮಾತನಾಡಿದ ಅವರು ಉಜಿರೆಯಂತಹ ಗ್ರಾಮೀಣ ಭಾಗದ ಜನತೆ ಯಾವುದೇ ಹೆಚ್ಚಿನ ವೈದ್ಯಕೀಯ ಸೌಲಭ್ಯ ಪಡೆಯಲು ದೂರದ ಮಂಗಳೂರಿಗೆ ಹೋಗಬೇಕಾಗುತ್ತಿತ್ತು. ಪೂಜ್ಯರು ಸುಸಜ್ಜಿತ ಆಸ್ಪತ್ರೆ ತೆರೆಯುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರ ಮುತುವರ್ಜಿಯಲ್ಲಿ ಒಳ್ಳೆಯ ವೈದ್ಯಕೀಯ ಸೇವೆ ದೊರೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಅತೀ ಹೆಚ್ಚು ಹಿಮೋಗ್ಲೋಬಿನ್ ಕೊರತೆ ಕಾಣುತ್ತಿದೆ. ಎನಿಮಿಯಾ ಕಾಯಿಲೆ ಸರ್ವೆ ಸಾಮಾನ್ಯವಾಗಿದೆ. ಜಂಕ್‌ಫುಡ್ ಮತ್ತು ಅತೀ ಹೆಚ್ಚು ಚಾಕಲೇಟ್ ಸೇವೆನೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ತಮ್ಮ ಮಕ್ಕಳನ್ನು ನಿಯಮಿತವಾಗಿ ವೈದ್ಯರಲ್ಲಿ ಪರೀಕ್ಷಿಸುವುದು ಮತ್ತು ಮಕ್ಕಳ ಚಲನವಲನಗಳನ್ನು ಗಮನಿಸುವುದು ಅತೀ ಮುಖ್ಯವಾಗಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ಮಾತನಾಡಿ, ನಾವು ಮಾಡುವ ಪ್ರತಿಯೊಂದು ಕೆಲಸವು ಜನರಿಗೆ ಪ್ರಯೋಜನವಾಗಬೇಕು ಎಂಬುದು ಪೂಜ್ಯರ ನಿಲುವು. ಪೂಜ್ಯರ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದ ಮತ್ತು ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ದಿನ ಮಕ್ಕಳರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗ ಒಂದರಲ್ಲಿಯೇ 3 ಮಂದಿ ಮಕ್ಕಳರೋಗ ತಜ್ಞರಿದ್ದು, ಇಲ್ಲಿನ ವೈದ್ಯರು, ಸಿಬ್ಬಂದಿಗಳು ರೋಗಿಗಳಿಗೆ ತೋರಿಸುವ ಪ್ರೀತಿ ಮತ್ತು ಕಾಳಜಿಯಿಂದಾಗಿ ಇಂದು ಎಸ್.ಡಿ.ಎಂ ಆಸ್ಪತ್ರೆ ಜನರಿಗೆ ಅತ್ಯಂತ ಹತ್ತಿರವಾಗಿದೆ.

ಮಕ್ಕಳಿಗೆ ತಮ್ಮ ಆರೋಗ್ಯ ಸಮಸ್ಯೆಯನ್ನು ವಿವರಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆತ್ತವರು ತುಂಬಾ ಕಾಳಜಿ ವಹಿಸಬೇಕು ಎಂದರು.


ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ರೋಗ ತಜ್ಞರಾದ ಡಾ| ಅರ್ಚನಾ ಕೆ. ಎಂ ಡಾ| ಪ್ರತೀತ್, ಡಾ| ನಿಖಿತಾ ಮಿರ್ಲೆ ಇವರು ಮಕ್ಕಳನ್ನು ಕಾಡುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದರು ಮತ್ತು ಶಿಬಿರದಲ್ಲಿ ಮಕ್ಕಳ ವೈದ್ಯಕೀಯ ಪರೀಕ್ಷೆ ನಡೆಸಿದರು. ಮನಶಾಸ್ತ್ರ ಸಲಹೆಗಾರರಾದ ಶ್ಯಾಮಿಲ ಅವರು ಮಕ್ಕಳನ್ನು ಕಾಡುವ ಮನೋರೋಗ ಮತ್ತು ಹೆತ್ತವರ ಜವಾಬ್ದಾರಿಗಳ ಬಗ್ಗೆ ವಿವರಿಸಿದರು. 110 ಮಂದಿ ಮಕ್ಕಳು ಶಿಬಿರದ ಸದುಪಯೋಗ
ಪಡೆದುಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಹೆತ್ತವರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಟೋರ್ ಇನ್-ಚಾರ್ಜ್ ಜಗನ್ನಾಥ ಎಂ. ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸಂಧ್ಯಾ ಶೆಣೈ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸುಮಂತ್ ರೈ, ಪರ್ಚೇಸ್ ಮೆನೇಜರ್ ಅಜಯ್ ಕುಮಾರ್ ಪಿ.ಕೆ, ಸಂಪರ್ಕಾಧಿಕಾರಿ ಚಿದಾನಂದ್ ಸಹಕರಿಸಿದರು.

Leave a Reply

Your email address will not be published. Required fields are marked *