Wed. Nov 19th, 2025

Dharmasthala: ಲಲಿತೋದ್ಯಾನ ಉತ್ಸವ ಸಂಪನ್ನ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಮೂರನೇ ದಿನವಾದ ಸೋಮವಾರ ಲಲಿತೋದ್ಯಾನ ಉತ್ಸವ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.

ಇದನ್ನೂ ಓದಿ: 💐💐ಬೆಳ್ತಂಗಡಿ: ಜಾನಪದ ಗೀತೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಾನ್ವಿ.ಬಿ ಧರ್ಮಸ್ಥಳ

ದೇವಾಲಯದ ಒಳಾಂಗಣದಲ್ಲಿ ಶ್ರೀ ಮಂಜುನಾಥನಿಗೆ ಪೂಜೆ ಸಲ್ಲಿಸಿ, ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ನಂತರ ವಿವಿಧ ವೈದಿಕ ಕಾರ್ಯಗಳೊಂದಿಗೆ 16 ಸುತ್ತುಗಳ ಪ್ರದಕ್ಷಿಣೆ ಹಾಕಿದ ನಂತರ ಸ್ವರ್ಣಪಲ್ಲಕ್ಕಿಯಲ್ಲಿ ಉತ್ಸವಮೂರ್ತಿ ದೇವಾಲಯದ ಹೊರಾಂಗಣದಲ್ಲಿ ದೀರ್ಘ ಪ್ರದಕ್ಷಿಣೆ ಹಾಕಿ ಹೊರಟು ಲಲಿತೋದ್ಯಾನ ಪ್ರವೇಶಿಸಿತು.

ಲಲಿತೋದ್ಯಾನ ಕಟ್ಟೆಯಲ್ಲಿ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ಶ್ರೀ ಮಂಜುನಾಥನಿಗೆ ಅಷ್ಟವಿಧಾನ ಸೇವೆ ಸಲ್ಲಿಸಲಾಯಿತು. ಸೇವೆ ಸಲ್ಲಿಸಿದ ಬಳಿಕ ಉತ್ಸವಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ಸ್ವರ್ಣಲೇಪಿತ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಶ್ರೀ ಮಂಜುನಾಥ ಸ್ವಾಮಿಯ ಉತ್ಸವಮೂರ್ತಿಯನ್ನು ದೇವಾಲಯದೊಳಗೆ ಕೊಂಡೊಯ್ಯುವಲ್ಲಿಗೆ ಲಲಿತೋದ್ಯಾನ ಉತ್ಸವ ಸಂಪನ್ನವಾಯಿತು.


ಉತ್ಸವಮೂರ್ತಿ ಸಾಗುವ ಹಾದಿಯಲ್ಲಿ ನೆರೆದಿದ್ದ ಕೆಲವು ಭಕ್ತರು ಕೈಯಲ್ಲಿ ದೀಪ ಹಿಡಿದು ಭಕ್ತಿಯಿಂದ ಉತ್ಸವಮೂರ್ತಿಯನ್ನು ಸ್ವಾಗತಿಸುತ್ತಿದ್ದುದು ಕಂಡುಬಂತು. ಶಂಖ, ಜಾಗಟೆ, ತಾಳ ಮೇಳಗಳೊಂದಿಗೆ ಚೆಂಡೆ, ವಾಲಗ, ನಾದಸ್ವರ, ಮೊದಲಾದ ವಾದ್ಯವೃಂದಗಳ ಜೊತೆಗೆ ಭಕ್ತರ ಜಯಘೋಷವೂ ಸೇರಿ ಭಕ್ತಿ ಪರಾಕಾಷ್ಠೆಯೊಂದಿಗೆ ಸಾಗಿದ ವೈಭವದ ಮೆರವಣಿಗೆಗೆ ಅಪಾರ ಭಕ್ತ ಸಮೂಹ ಸಾಕ್ಷಿಯಾಗಿತ್ತು. ಉತ್ಸವಮೂರ್ತಿ ಮುಂದೆ ಮುಂದೆ ಸಾಗುತ್ತಿರುವ
ವೇಳೆಯಲ್ಲಿ ದೇವಾಲಯದ ಆನೆಗಳಾದ ಲಕ್ಷ್ಮಿ, ಶಿವಾನಿ ಮತ್ತು ಬಸವ ಮೆರವಣಿಗೆಯಲ್ಲಿ ಗಾಂಭಿರ್ಯದ ಹೆಜ್ಜೆಗಳನ್ನಿಡುತ್ತಾ ಸಾಗಿ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ಭಕ್ತಿಯ ದೀಪಾರ್ಚನೆ: ಉತ್ಸವಮೂರ್ತಿ ಸಾಗುವ ಹಾದಿಯ ಇಕ್ಕೆಲಗಳಲ್ಲಿ ದೀಪ ಬೆಳಗಿಸಲಾಗಿತ್ತು. ಮೆರವಣಿಗೆಗೂ ಮುನ್ನ ದೇವಾಲಯದ ಹೊರಾಂಗಣದಲ್ಲಿದ್ದ ಕೆಲವು ಭಕ್ತರು ಆ ದೀಪಗಳನ್ನು ಹಿಡಿದು ದೂರದಿಂದಲೇ ಆರತಿ ಮಾಡುತ್ತ ಭಕ್ತಿಯ ದೀಪಾರ್ಚನೆಗೈಯುತ್ತಿದ್ದುದು ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆ ಸಾಗುವ ಹಾದಿಯಲ್ಲಿ ಕ್ಷೇತ್ರದ ಭಕ್ತರು ಸ್ವಯಂ ಪ್ರೇರಿತರಾಗಿ ಅಲ್ಲಲ್ಲಿ ಮತ್ತಷ್ಟು ದೀಪ ಬೆಳಗಿಸುತ್ತಿದ್ದುದು ಕೂಡ ಕಂಡುಬಂತು.

Leave a Reply

Your email address will not be published. Required fields are marked *