ಮಹಾರಾಷ್ಟ್ರ (ಡಿ.02): ಪ್ರೀತಿ ಆಗಷ್ಟೇ ಚಿಗುರೊಡೆದಿತ್ತು. ಜಾತಿ, ಬಡವ, ಶ್ರೀಮಂತ ಎಲ್ಲವನ್ನೂ ಮೀರಿ ಗಟ್ಟಿಯಾಗಿತ್ತು. ಅಷ್ಟೊತ್ತಿಗೆ ಬೇರೆ ಯಾರದ್ದೂ ಅಲ್ಲ ಕುಟುಂಬದವರ ಕಣ್ಣೇ ಬಿತ್ತು. ಹುಡುಗ ಬೇರೆ ಜಾತಿಯವನೆಂದು ಮದುವೆ ಬೇಡ ಅಂದಿದ್ದಷ್ಟೇ ಅಲ್ಲದೆ ಗುಂಡು ಹಾರಿಸಿ ಆತನನ್ನು ಕೊಂದೇ ಬಿಟ್ಟಿದ್ದರು. ಆ ಪ್ರೀತಿ ಇಂದು ಬಂದು ನಾಳೆ ಹೋಗುವುದಾಗಿರಲಿಲ್ಲ, ಆತನೇ ಗಂಡನಾಗಬೇಕೆಂದು ಆಕೆಯೂ ಕೂಡ ಬಯಸಿದ್ದಳು. ಹೀಗಾಗಿ ಗೆಳೆಯನ ಶವದ ಜತೆಯೇ ಮದುವೆಯಾಗಿ, ಅವರ ಮನೆಗೆ ಸೊಸೆಯಾಗಿ ಹೋಗಿದ್ದ ಅಂಚಲ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ⭕ಬಂಟ್ವಾಳ: ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಇದು ಮಹಾರಾಷ್ಟ್ರದ ನಾಂಡೇದ್ನಲ್ಲಿ ನಡೆದ ಘಟನೆ. ಆಕೆ ಇನ್ಸ್ಟಾಗ್ರಾಂ ಮೂಲಕ ಸಕ್ಷಮ್ನನ್ನು ಭೇಟಿಯಾಗಿದ್ದಳು. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತ್ತು. ಇದ್ಯಾವುದನ್ನೂ ಅವರು ಮನೆಯವರ ಬಳಿ ಮುಚ್ಚಿಟ್ಟಿರಲಿಲ್ಲ. ಮೊದ ಮೊದಲು ಬೇರೆ ಜಾತಿ ಬೇಡ ಆತ ಅಂದಾಗ ಯುವತಿ ತಲೆ ಕೆಡಿಸಿಕೊಂಡಿರಲಿಲ್ಲ, ಯಾವತ್ತೋ ಒಂದು ದಿನ ಒಪ್ಪಿಕೊಳ್ಳಬಹುದು ಎನ್ನುವ ಭರವಸೆಯಲ್ಲಿದ್ದಳು, ಆದರೆ ಯಾವಾಗ ಆತನ ಹತ್ಯೆ ಮಾಡಲಾಯಿತೋ ಅಂದೇ ಆಕೆ ತವರಿನ ಸಂಬಂಧವನ್ನು ಕಡಿದುಕೊಂಡುಬಿಟ್ಟಿದ್ದಾಳೆ.

ನನ್ನ ಕುಟುಂಬವೇ ನಮಗೆ ದ್ರೋಹ ಬಗೆದಿದೆ, ನನ್ನ ಕುಟುಂಬ ಸದಸ್ಯರು ಸಕ್ಷಮ್ ಜತೆ ಸಮಯ ಕಳೆಯುತ್ತಿದ್ದರು, ಅವನೊಂದಿಗೆ ಚೆನ್ನಾಗಿಯೇ ವರ್ತಿಸುತ್ತಿದ್ದರು. ಒಟ್ಟಿಗೆ ಊಟ ಮಾಡುತ್ತಿದ್ದರು ಎಲ್ಲವೂ ಚೆನ್ನಾಗಿದೆ ಎಂದು ಅವನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಈ ರೀತಿ ನಡೆಯುತ್ತೆ ಎನ್ನುವ ಕಲ್ಪನೆಯೂ ನಮಗಿರಲಿಲ್ಲ ಎಂದು ಆಂಚಲ್ ಕಣ್ಣೀರಿಟ್ಟಿದ್ದಾರೆ. ಇದೀಗ ಆಂಚಲ್ ಕುಟುಂಬ ಸದಸ್ಯರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.
ಸಕ್ಷಮ್ ಕೊಲೆಯಾದ ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ಸಹೋದರ ಪೊಲೀಸ್ ಠಾಣೆಗೆ ಕರೆದೊಯ್ದು ಸಕ್ಷಮ್ ವಿರುದ್ಧ ಸುಳ್ಳು ದೂರು ದಾಖಲಿಸುವಂತೆ ಹೇಳಿದ್ದ, ನಾನು ನಿರಾಕರಿಸಿದ್ದೆ. ಆಗ ಪೊಲೀಸರು ನೀವು ಹೇಗೂ ಕೊಲೆ ಮಾಡಿ ಇಲ್ಲಿಎ ಬರುತ್ತಲೇ ಇರುತ್ತೀರಿ, ಸಕ್ಷಮ್ನನ್ನು ಏಕೆ ಕೊಲ್ಲಬಾರದು ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಸಹೋದರ ನಾನು ಸಂಜೆಯೊಳಗೆ ಅವನನ್ನು ಕೊಂದು ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿ ಬಂದಿದ್ದ. ಪೊಲೀಸರೇ ಈ ರೀತಿ ವರ್ತಿಸಿದರೆ ಜನರಿಗೆ ನ್ಯಾಯ ಕೊಡಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಅಂಚಲ್ ಅವರ ಕಿರಿಯ ಸಹೋದರ ಹಿಮೇಶ್ ಹಾಗೂ ಸಕ್ಷಮ್ ನಡುವೆ ವಾಗ್ವಾದ ನಡೆದಿತ್ತು. ಹಿಮೇಶ್ ಸಾಕ್ಷಮ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದ್ದು, ಗುಂಡು ಅವರ ಪಕ್ಕೆಲುಬುಗಳಿಗೆ ತಗುಲಿತ್ತು. ಹಿಮೇಶ್, ಅವರ ಸಹೋದರ ಸಾಹಿಲ್, ಅವರ ತಂದೆ ಗಜಾನನ್ ಮಾಮಿದ್ವರ್ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.

ಸಕ್ಷಮ್ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ಅಂಚಲ್ ಅವರ ಮನೆಗೆ ಹೋಗಿ ಶವದ ಜತೆ ಮದುವೆಯಾಗಿದ್ದಾರೆ. ನಾನು ಕಳೆದ ಮೂರು ವರ್ಷಗಳಿಂದ ಸಕ್ಷಮ್ ಅವರನ್ನು ಪ್ರೀತಿಸುತ್ತಿದ್ದೆ, ಆದರೆ ನನ್ನ ತಂದೆ ಜಾತಿ ಬೇರೆಯಾಗಿದ್ದ ಕಾರಣ ನಮ್ಮ ಸಂಬಂಧವನ್ನು ವಿರೋಧಿಸಿದರು. ಕೊಲೆ ಮಾಡಿವುದಾಗಿ ಆಗಾಗ ಬೆದರಿಕೆ ಹಾಕುತ್ತಿದ್ದರು ಎಂದು ಅಂಚಲ್ ಹೇಳಿದ್ದಾರೆ.


