ಬೆಂಗಳೂರು (ಡಿ.07): ಕಳೆದ 5 ದಿನಗಳಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಚಾರ ನಡೆಸಬೇಕಿದ್ದ ಇಂಡಿಗೋ ವಿಮಾನಗಳ (IndiGo Flights) ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಇಂದೂ ಅದೇ ದುಸ್ಥಿತಿ ಮುಂದುವರೆದಿದೆ. ಈ ಹಿನ್ನಲೆ ಪ್ರಯಾಣಿಕರು ನಾನಾ ವಿಧದಲ್ಲಿ ಪರದಾಡುತ್ತಿದ್ದಾರೆ. ವಿಮಾನ ರದ್ದಾದ ಕಾರಣ ವಧು-ವರರು ಆನ್ಲೈನ್ನಲ್ಲಿ ಆರತಕ್ಷತೆ ಮಾಡಿಕೊಂಡಿದ್ದರು. ಇಷ್ಟೇ ಅಲ್ಲದೇ ಕೆಲ ಖಾಸಗಿ ಬಸ್ ಕಂಪನಿಗಳು ಬೆಂಗಳೂರು-ಮುಂಬೈ ಮಾರ್ಗದ ಟಿಕೆಟ್ ದರವನ್ನು 10,000 ರೂ. ವರೆಗೆ ಹೆಚ್ಚಿಸಿದ್ದವು. ಈ ಎಲ್ಲಾ ಅನಾನುಕೂಲತೆಗಳ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಿಜಿ ನೀಟ್ನ ಪ್ರವೇಶ ಪ್ರಕ್ರಿಯೆ ದಿನಾಂಕ ಮುಂದೂಡಿಕೆ ಮಾಡಿದೆ.

ಇದನ್ನೂ ಓದಿ: ⭕ಹೊಸ ವರ್ಷಕ್ಕೆ ಏರ್‌ಟೆಲ್, ಜಿಯೋ, ವಿಐಯಿಂದ ರೀಚಾರ್ಜ್ ಯೋಜನೆ ಬೆಲೆ ಹೆಚ್ಚಳ..?
ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಮುಂದೂಡಲು KEAಗೆ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮನವಿ ಪರಿಗಣಿಸಿರುವ ಪ್ರಾಧಿಕಾರ ದಾಖಲಾತಿಗೆ ಡಿಸೆಂಬರ್ 8ರವರೆಗೆ ಅವಕಾಶ ನೀಡಿದೆ. ಈ ಮೊದಲು ಡಿ.5ರಂದು ಶುಲ್ಕಪಾವತಿ ಮಾಡಿ ಡಿ.6ಕ್ಕೆ ವರದಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಇದೀಗ ಡಿಸೆಂಬರ್ 8ರ ಮಧ್ಯಾಹ್ನ 12.30ರೊಳಗೆ ಶುಲ್ಕ ಪಾವತಿಗೆ ಅವಕಾಶ ನೀಡಿದ್ದು, ಮಧ್ಯಾಹ್ನ 2.30ರೊಳಗೆ ದಾಖಲೆ ಪತ್ರ ಸಲ್ಲಿಕೆಗೆ ಮಾಡಲು ಡೆಡ್ಲೈನ್ ನಿಗದಿಪಡಿಸಿದೆ.

ಕೇವಲ ಭಾರತೀಯರಿಗಷ್ಟೇ ಅಲ್ಲದೇ ವಿದೇಶಿ ಪ್ರಯಾಣಿಕರಿಗೂ ವಿಮಾನ ರದ್ದತಿಯ ಬಿಸಿ ತಾಕಿದ್ದು, ಜರ್ಮನಿಯ ಪ್ರಜೆಗಳಿಬ್ಬರಿಗೆ ಸಂಕಷ್ಟ ಎದುರಾಗಿದೆ. ಜೋದಪುರ್ಗೆ ತೆರಳುವ ಸಲುವಾಗಿ ಜರ್ಮನಿಯಿಂದ ಬೆಂಗಳೂರಿಗೆ ಇಬ್ಬರು ವಿದೇಶಿ ಪ್ರಯಾಣಿಕರು ಆಗಮಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವಿಮಾನ ರದ್ದಾದ ಕಾರಣ ಏರ್ಪೋಟ್ ನ ಇಂಡಿಗೋ ಕೌಂಟರ್ ಬಳಿ ಮತ್ತೊಂದು ಪ್ಲೈಟ್ ಟಿಕೆಟ್ ಬುಕ್ ಮಾಡಲು ಪರದಾಡುತ್ತಿದ್ದಾರೆ.
ದೇಶಾದ್ಯಂತ ಇಂಡಿಗೋ ವಿಮಾನ ಅವ್ಯವಸ್ಥೆ ಹಿನ್ನೆಲೆ ಇಂಡಿಗೋ ಸಿಇಓ ಪೀಟರ್ ಎಲ್ಬರ್ಸ್ಗೆ ಡಿಜಿಸಿಎ (Directorate General of Civil Aviation) ನೋಟಿಸ್ ನೀಡಿದ್ದು, 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿ ಸೇರಿದಂತೆ ವಿಮಾನಗಳ ಕಾರ್ಯಾಚರಣೆಯ ಸಂಪೂರ್ಣ ವೈಫಲ್ಯ ಕುರಿತು ನೋಟಿಸ್ ನೀಡಲಾಗಿದ್ದು, ಉತ್ತರ ನೀಡಲು ವಿಫಲವಾದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿಜಿಸಿಎ ಎಚ್ಚರಿಕೆ ನೀಡಿದೆ.




