ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಎಂದಾಗ ಎಲ್ಲರಿಗೂ ಸ್ಮೃತಿಪಟಲದಲ್ಲಿ ಮೂಡುವುದು ಶ್ರೀ ಜನಾರ್ದನ ಸ್ವಾಮಿಯ ನಾಮಧೇಯ. ಉಜಿರೆಯಲ್ಲಿ ಪ್ರಸಿದ್ಧಿಯಾಗಿರುವ ಶ್ರೀ ಜನಾರ್ದನ ಸ್ವಾಮಿಯ ದೇಗುಲಕ್ಕೂ, ಇಂದು ನಮ್ಮ ಉಜಿರೆಯ ಶ್ರೀ.ಧ.ಮಂ.ಅ.ಹಿ.ಪ್ರಾ.ಶಾಲೆಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧಗಳ ಹಿಂದೆ ಒಂದು ಹಿನ್ನಲೆಯೂ ಇದೆ.
ಸ್ವಾತಂತ್ರ್ಯ ಪೂರ್ವದಲ್ಲಿ 8-7-1925ರಂದು ಮಲೆನಾಡು ಪ್ರದೇಶವಾದ ಉಜಿರೆಯಲ್ಲಿ ಪ್ರತಿಷ್ಠಿತ ಪಡುವೆಟ್ಟು ಮನೆತನದ ಕೀರ್ತಿಶೇಷ ಶ್ರೀ ಕೃಷ್ಣ ಪಡ್ವೆಟ್ನಾಯರು ಊರಿನ ಜನರ ಶಿಕ್ಷಣದ ಅವಶ್ಯಕತೆಯನ್ನು ಮನಗಂಡು ತಮ್ಮ ಸ್ವಂತ ಸ್ಥಳ ಹಾಗೂ ಸ್ವಂತ ಕಟ್ಟಡದಲ್ಲಿ ಶಾಲೆಯನ್ನು ಸ್ಥಾಪಿಸಿ ಉಜಿರೆಯ ಆರಾಧ್ಯ ದೇವರಾದ ಶ್ರೀ ಜನಾರ್ದನ ಸ್ವಾಮಿ ಹೆಸರಿನಲ್ಲಿ “ಶ್ರೀ ಜನಾರ್ದನ ಸ್ವಾಮಿ ಎಲಿಮೆಂಟರಿ ಶಾಲೆ” ಎಂದು ನಾಮಕರಣ ಮಾಡಿದರು.

ಉಡುಪಿಯ ಕಾಪುವಿನ ಜೆ. ಅನಂತಯ್ಯನವರು ಮುಖ್ಯೋಪಾಧ್ಯಾಯರು ಹಾಗೂ ಮೆನೇಜರ್ ಹುದ್ದೆಯನ್ನು ಅಲಂಕರಿಸಿ ಶಾಲೆಯನ್ನು ನಡೆಸುತ್ತಾ ಬಂದರು. ಆಗ ಈ ಶಾಲೆಯ ಹೆಸರು ಶ್ರೀ ಜನಾರ್ದನ ಕಿರಿಯ ಪ್ರಾಥಮಿಕ ಶಾಲೆ ಎಂದಾಗಿತ್ತು. 1955ರಂದು ಕೀರ್ತಿಶೇಷ ಪೂಜ್ಯ ಶ್ರೀ ಡಿ ರತ್ನವರ್ಮ ಹೆಗ್ಗಡೆಯವರು ಪಟ್ಟಾಭಿಷೇಕ ಆದ ವರ್ಷವೇ, ಈ ಶಾಲೆಯ ಆಡಳಿತವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಸ್ತಾಂತರಿಸಲ್ಪಟ್ಟಿತು.
1956 ರಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾಯಿತು. ಬಳಿಕ 1986ರಲ್ಲಿ ರತ್ನಮಾನಸದ ಪಕ್ಕದಲ್ಲಿ ಷಡ್ಭುಜಾಕೃತಿಯ ನವೀನ ಮಾದರಿಯ ಶಾಲಾ ಕಟ್ಟಡದ ಹೆಚ್ಚುವರಿ ವಿಭಾಗವನ್ನು ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಕೆ.ರಘುಪತಿಯವರಿಂದ ಉದ್ಘಾಟಿಸಲ್ಪಟ್ಟಿತು. 1985 ರಿಂದ ಈ ಶಾಲೆಯು ಶಿಕ್ಷಣ ಸಚಿವರಾದ ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ) ಉಜಿರೆಯ ಆಡಳಿತಕ್ಕೊಳಪಟ್ಟಿದೆ. 1992 ರಿಂದ ಶಾಲಾ ಗೇಟಿನ ರಚನೆ, ಮಕ್ಕಳಿಗೆ ಶೌಚಾಲಯ ಹಾಗೂ ಕ್ರೀಡಾಂಗಣದ ನಿರ್ಮಾಣ ಮೊದಲಾದ ಕಾಮಗಾರಿಗಳು ನಡೆದು, 2002ನೇ ಇಸವಿಯಲ್ಲಿ ವಿಸ್ತ್ರತ ಕಟ್ಟಡದ ಉದ್ಘಾಟನೆಯು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರಿಂದ ನೆರವೇರಿಸಲ್ಪಟ್ಟಿತು.
2007 ರಲ್ಲಿ ಶಾಲೆಯ ಅಮೃತ ಮಹೋತ್ಸವ ಸಮಾರಂಭ ಹಾಗೂ ನೂತನ ರಂಗ ಮಂದಿರದ ಉದ್ಘಾಟನಾ ಕಾರ್ಯಕ್ರಮ ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಪೂಜ್ಯ ವಿಜಯರಾಘವ ಪಡ್ವೆಟ್ನಾಯರ ಉಪಸ್ಥಿತಿಯಲ್ಲಿ ನೆರವೇರಿತು.
ಪ್ರಸ್ತುತ ಈ ವಿದ್ಯಾಮಂದಿರವು ಸುದೀರ್ಘ ಅವಧಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನವಿತ್ತು ಸಮಾಜದ ಶ್ರೇಯಸ್ಸಿಗೆ ಮೇರುಕೊಡುಗೆಯನ್ನಿತ್ತು ಶತಮಾನೋತ್ಸವ ಸಂಭ್ರಮದಲ್ಲಿದೆ. 1925 ರಿಂದ 2025ರವರೆಗೆ ಶತವರುಷದಲ್ಲಿ ಉಜಿರೆ ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಡೆದು ಬಂದ ದಾರಿ ಅವಿಸ್ಮರಣೀಯವಾಗಿದೆ. ಇಲ್ಲಿ ವಿದ್ಯೆ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಇಂದು ಸಮಾಜದ ವಿವಿಧ ರಂಗಗಳಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಹಾಗೂ ಬೇರೆ ಬೇರೆ ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಶಾಲೆಯ ಏಳಿಗೆಗೆ ಸದಾ ಶ್ರಮಿಸುತ್ತಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕುಟುಂಬ ವರ್ಗವನ್ನು ಇಲ್ಲಿ ನೆನೆಯುವಂತಾಗಿದೆ. ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಿಗುತ್ತಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ) ಉಜಿರೆ ಪೂರೈಸುತ್ತಿದ್ದು, ಈ ಶತಮಾನೋತ್ಸವ ಸಂದರ್ಭದಲ್ಲಿ ಚಿಣ್ಣರ ಆಟದ ಮನೆ, ಶಾಲೆಯ ನವೀಕರಣ, ನೂತನ ಶೌಚಾಲಯ, ಇಂಟರ್ ಲಾಕ್ ಅಳವಡಿಕೆ ಮುಂತಾದ ಕಾಮಗಾರಿಗಳು ಸುಮಾರು 80 ಲಕ್ಷದಲ್ಲಿ ಆಡಳಿತ ಮಂಡಳಿಯು ಒದಗಿಸಿದೆ.
ಶತಮಾನೋತ್ಸವ ಸಮಿತಿಯ ವತಿಯಿಂದ ಜರಗಿದ ತಿಂಗಳವಾರು ಕಾರ್ಯಕ್ರಮಗಳು:
- ಕಾನೂನು ಮಾಹಿತಿ ಮತ್ತು ವರ್ಲ್ಡ್ ಡೇ ಓಫ್ ಸೋಶಿಯಲ್ ಜಸ್ಟಿಸ್ ಕಾರ್ಯಕ್ರಮ
- ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರ
- ಉಚಿತ ಶ್ರವಣ ತಪಾಸಣಾ ಶಿಬಿರ
- ರಕ್ತದಾನ ಶಿಬಿರ
- ಶಾಲಾ ಸಂಸ್ಥಾಪನಾ ದಿನಾಚರಣೆ ಮತ್ತು ನೂತನ ಚಿಣ್ಣರ ಆಟದ ಮನೆಯ ಉದ್ಘಾಟನೆ
- ವನಮಹೋತ್ಸವ ಕಾರ್ಯಕ್ರಮ
- ಶಾಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ವಿತರಣೆ
- ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
- ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಕ್ರೀಡಾ ಕೂಟ
- ಶಾಲೆಗೆ ನವೀಕೃತ ಗ್ರಂಥಾಲಯದ ಕೊಡುಗೆ
- ನಿವೃತ್ತ ಶಿಕ್ಷಕರಿಗೆ ಸನ್ಮಾನ
ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಿಸಲಾದ ಸುಸಜ್ಜಿತವಾದ ಗ್ರಂಥಾಲಯ ಉದ್ಘಾಟನೆಗೆ ಸಿದ್ಧಗೊಂಡಿದೆ.

ದಿನಾಂಕ 19/12/2025ರಂದು ಪೂರ್ವಾಹ್ನ ಸಮಯ 11.00 ರಿಂದ ಶ್ರೀ ಶರತ್‌ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ, ಶ್ರೀ ಡಿ. ಹರ್ಷೇಂದ್ರ ಕುಮಾರ್ ಕಾರ್ಯದರ್ಶಿಗಳು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ) ಉಜಿರೆ, ಇವರು ಕಾರ್ಯಕ್ರಮ ಉದ್ಘಾಟಿಸಲಿರುವರು. ವಿಶೇಷ ಅಭ್ಯಾಗತರಾಗಿ ಶ್ರೀಮತಿ ಉಷಾಕಿರಣ್ ಕಾರಂತ್ ಅಧ್ಯಕ್ಷರು, ಗ್ರಾ.ಪಂ ಉಜಿರೆ, ಶ್ರೀಮತಿ ತಾರಕೇಸರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೆಳ್ತಂಗಡಿ. ಡಾ. ಔದ್ರಮ ಕೆ.ಎ.ಎಸ್ ಕುಲಸಚಿವರು ಬಾಗಲಕೋಟೆ ವಿಶ್ವವಿದ್ಯಾನಿಲಯ, ಶ್ರೀ ಶೇಕ್ ಲತೀಫ್, ಕೆ.ಎ.ಎಸ್. ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರು ಭಾಗವಹಿಸಲಿರುವರು.

20-12-2025 ಶನಿವಾರದಂದು ಸಂಜೆ ಸಮಯ 4.30ರಿಂದ ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದದೊಂದಿಗೆ, ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಫರೀದ್, ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್, ಸನ್ಮಾನ್ಯ ಶ್ರೀ ಮಧುಬಂಗಾರಪ್ಪ, ಸನ್ಮಾನ್ಯ ಶ್ರೀ ಹರೀಶ್ ಪೂಂಜ, ಮಾನ್ಯ ಸಂಸದರು, ವಿಧಾನ ಪರಿಷತ್ ಸದಸ್ಯರು, ಉಜಿರೆ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ನಿವೃತ್ತ ಮತ್ತು ಪ್ರವೃತ್ತ ಶಿಕ್ಷಕರನ್ನು ಆಡಳಿತ ಮಂಡಳಿಯು ಗೌರವಿಸುವ ಕಾರ್ಯಕ್ರಮ ಜರಗಲಿದೆ.

ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಎಸ್.ಡಿ.ಎಂ ಕಲಾವೈಭವ, ಮಂದಾರ ಕಲಾವಿದರು ಉಜಿರೆ ಇವರಿಂದ ತುಳುನಾಟಕ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಜತ್ ಮೈಯರವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಸತೀಶ್ಚಂದ್ರ ಎಸ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ ನಾಯ್ಕ ಇವರು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಧನ್ಯಕುಮಾರ್ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆ(ರಿ), ಶ್ರೀ ಶಾಲಾ ಶತಮಾನೋತ್ಸವ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಅಬೂಬಕ್ಕರ್, ಕಾರ್ಯಕ್ರಮ ಸಂಯೋಜಕರು ಶ್ರೀ ಬಿ.ಸೋಮಶೇಖರ ಶೆಟ್ಟಿ, ಕೋಶಾಧಿಕಾರಿ ಶ್ರೀ ಮೋಹನ್ ಶೆಟ್ಟಿಗಾರ್ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು.


