ವಿಟ್ಲ: ಭಜನಾ ಮಂದಿರ, ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಮಾಡುವುದರ ಜೊತೆಗೆ ಪ್ರತಿ ಮನೆಯಲ್ಲೂ ನಿರಂತರ ಭಜನೆ ನಡೆಯಬೇಕು, ವ್ಯಕ್ತಿ ನಿರ್ಮಾಣ ಶಿಕ್ಷಣ ದೊರೆತಲ್ಲಿ ಮನುಷ್ಯನ ಮನಸ್ಸು ಚಂಚಲಗೊಳ್ಳುವುದಿಲ್ಲ ಅದಕ್ಕಾಗಿ ಧಾರ್ಮಿಕ ಶಿಕ್ಷಣ ಅತ್ಯಗತ್ಯ. ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರೇರಣೆ ನೀಡುತ್ತಿದ್ದು ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಶ್ಲಾಘನೀಯ, ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ) ವಿಟ್ಲ ತಾಲ್ಲೂಕು ಅಳಿಕೆ ವಲಯ ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು, ಶ್ರೀ ಮಹಿಷಮರ್ಧಿನಿ ದೇವಸ್ಥಾನ ಪುಣಚ,ಇವರ ಸಹಯೋಗದೊಂದಿಗೆ ದಿನಾಂಕ 21-12-2025 ರಂದು ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಪುಣಚ ದಲ್ಲಿ ನಡೆದ ಭಜನೋತ್ಸವ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ನಿವೃತ್ತ ಅಧ್ಯಾಪಕರಾದ ಶ್ರೀ ರಾಧಾಕೃಷ್ಣಾಯ ಅಡ್ಯಂತಾಯ ತಿಳಿಸಿದರು.

ಶ್ರೀ ಮಹಿಷ ಮರ್ದಿನಿ ದೇವಸ್ಥಾನ ಪುಣಚ ಇಲ್ಲಿನ ಗೌರವಾಧ್ಯಕ್ಷರಾದ ಶ್ರೀ ರಂಗಮೂರ್ತಿ ಎಸ್ ಆರ್ ರವರು ದೀಪ ಬೆಳಗಿಸಿ ಭಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳವು ಭಜನಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದ್ದು ಕಳೆದ 27 ವರ್ಷಗಳಿಂದ ಭಜನಾ ಕಮ್ಮಟದ ಮುಖಾಂತರ ಸಾವಿರಾರು ಭಜಕರಿಗೆ ತರಬೇತಿಗಳನ್ನು ನೀಡಿ ಮನೆ ಮನ ಬೆಳಗುವಲ್ಲಿ ಮಹತ್ತರ ಪಾತ್ರ ವಹಿಸಿರುತ್ತದೆ ಹಾಗೂ ಈ ಭಜನೋತ್ಸವ ಕಾರ್ಯಕ್ರಮಕ್ಕೆ ಪೂಜ್ಯರು ಕಳುಹಿಸಿದ ಶುಭ ಸಂದೇಶ ಪತ್ರವನ್ನು ವಾಚಿಸಿದರು.

ವಿಟ್ಲ ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ಇವರು ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದು ಇದರ ಅನುಷ್ಠಾನಕ್ಕೆ ಸಹಕರಿಸಿದ ಯೋಜನೆಯ ಫಲಾನುಭವಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ದೇವಸ್ಥಾನ ಮತ್ತು ಸ್ಥಳೀಯರ ಸಹಕಾರದಿಂದ ಇಲ್ಲಿನ ಭಜನೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಪುಣಚ ಇದರ ಅಧ್ಯಕ್ಷರಾದ ಶ್ರೀ ಮಾರಪ್ಪ ಶೆಟ್ಟಿ ಬೈಲುಗುತ್ತು ಇವರು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಅಭಿವೃದ್ಧಿಯ ಹಿಂದೆ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾದದ್ದು,ಅದನ್ನೆಂದೂ ಮರೆಯುವಂತಿಲ್ಲ, ಗ್ರಾಮಸ್ಥರೆಲ್ಲರೂ ಕ್ಷೇತ್ರಕ್ಕೆ ಆಭಾರಿಯಾಗಿದ್ದೇವೆ.ಈ ಭಜನೋತ್ಸವದ ಮುಖಾಂತರ ಮತ್ತೊಮ್ಮೆ ನಾವೆಲ್ಲರೂ ಸೇರುವ ಹಾಗೆ ಆಗಿರುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

ವೇದಿಕೆಯಲ್ಲಿ ವಿಟ್ಲ ತಾಲೂಕು ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ಕಣಂತೂರು,ಭಜನಾ ಪರಿಷತ್ತಿನ ವಿಟ್ಲ ತಾಲೂಕು ಅಧ್ಯಕ್ಷರಾದ ಶ್ರೀ ದೇವಿದಾಸ ಶೆಟ್ಟಿ, ಅಳಿಕೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ,ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬೇಬಿ ಪಟಿಕಲ್ಲು,ಅಳಿಕೆ ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಬಾಬು ನಾಯ್ಕ, ಅಳಿಕೆ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಧ್ಯಕ್ಷರಾದ ಶ್ರೀ ರಾಜೇಂದ್ರ ರೈ ಬೈಲು ಗುತ್ತು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಶ್ರೀಮತಿ ಮೀನಾಕ್ಷಿ ಇವರು ಸ್ವಾಗತಿಸಿ,ಸೇವಾ ಪ್ರತಿನಿಧಿ ಶ್ರೀಮತಿ ಕಾವ್ಯ ಪಿ ಧನ್ಯವಾದವಿತ್ತರು. ಶ್ರೀ ಪ್ರವೀಣ್ ಪೂಜಾರಿ ಸಣ್ಣಗುತ್ತು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಲಯದ 21 ಭಜನಾ ಮಂಡಳಿಗಳ 326 ಕ್ಕೂ ಅಧಿಕ ಭಜಕರಿಂದ ಭಜನಾ ಸೇವೆಯು ನಡೆಯಿತು. ಕಾರ್ಯಕ್ರಮದಲ್ಲಿ ಅಳಿಕೆ ವಲಯದ ಸೇವಾ ಪ್ರತಿನಿಧಿಗಳು, ಸಾಮಾನ್ಯ ಸೇವಾದಾರರು ,ಸುವಿಧಾ ಸಹಾಯಕರು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು, ಭಜನಾ ಪರಿಷತ್ ಅಳಿಕೆ ವಲಯದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ,ಭಜನೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.


