ಉಜಿರೆ: ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ಹಾಗೂ ವಕೀಲರ ಸಂಘ (ರಿ). ಬೆಳ್ತಂಗಡಿ, ಮತ್ತು ಬೆನಕ ಆಸ್ಪತ್ರೆ, ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 23ರಂದು ಉಜಿರೆಯ ಬೆನಕ ಆಸ್ಪತ್ರೆಯ ಆವರಣದಲ್ಲಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಕಾನೂನು ತಿಳುವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್ ಪ್ರಭಾಕರ್ ನಿಧನ
ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟನೆ ಕಾರ್ಯಕ್ರಮವನ್ನು ಬೆಳ್ತಂಗಡಿ ಜೆಎಂಎಫ್ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಡಿ.ಎಚ್. ಅವರು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕಾನೂನಿನ ಜ್ಞಾನವು ಅತ್ಯಂತ ಅಗತ್ಯವಾಗಿದ್ದು, ರೋಗಿಗಳ ಹಕ್ಕುಗಳು, ವೈದ್ಯರ ಜವಾಬ್ದಾರಿಗಳು ಹಾಗೂ ಸಂಸ್ಥೆಯ ಆಡಳಿತದಲ್ಲಿ ಕಾನೂನು ಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ. ಅವರು ಮಾತನಾಡಿ, ಆಸ್ಪತ್ರೆಯ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿದ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು. ಇಂತಹ ಕಾರ್ಯಕ್ರಮಗಳು ಸಿಬ್ಬಂದಿಯ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಬೆನಕ ಆಸ್ಪತ್ರೆಯ ಸೇವೆಗೆ ಮೆಚ್ಚುಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ ಅವರು ಮಾತನಾಡಿ, ಬೆನಕ ಆಸ್ಪತ್ರೆಯು ತಾಲೂಕಿನಲ್ಲೇ ವಿಶ್ವಾಸಾರ್ಹ ಆರೋಗ್ಯ ಸೇವಾ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದರು. ಡಾ. ಗೋಪಾಲಕೃಷ್ಣ ಕೆ. ಮತ್ತು ಅವರ ವೈದ್ಯಕೀಯ ತಂಡ 24 ಗಂಟೆಗಳ ಸೇವೆ ಒದಗಿಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಪ್ರಸ್ತುತ 130 ಬೆಡ್ಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆ ಮುಂದಿನ ದಿನಗಳಲ್ಲಿ 500 ಬೆಡ್ಗಳ ಆಧುನಿಕ ಆಸ್ಪತ್ರೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಉಚಿತ ಕಾನೂನು ನೆರವಿನ ಮಾಹಿತಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಅವರು ಮಾತನಾಡಿ, ನ್ಯಾಯಾಲಯದ ಮೂಲಕ ಲಭ್ಯವಿರುವ ಉಚಿತ ಕಾನೂನು ನೆರವು, ಲೋಕ ಅದಾಲತ್, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದುರ್ಬಲ ವರ್ಗಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲೆ ಆರ್. ಸುಭಾಷಿಣಿ ಅವರು ಏಡ್ಸ್ ಕಾಯಿಲೆ, ಅದರ ಹರಡುವಿಕೆ, ತಡೆಗಟ್ಟುವಿಕೆ ಹಾಗೂ ಸಾಮಾಜಿಕ ಭೇದಭಾವ ನಿವಾರಣೆಯ ಅಗತ್ಯತೆ ಕುರಿತು ವಿವರವಾಗಿ ತಿಳಿಸಿದರು.

ವೇದಿಕೆಯಲ್ಲಿ ವಕೀಲರ ಸಂಘದ ಕೋಶಾಧಿಕಾರಿ ಮಮ್ತಾಜ್ ಬೇಗಂ ಉಪಸ್ಥಿತರಿದ್ದು. ಕಾರ್ಯಕ್ರಮದ ಕೊನೆಯಲ್ಲಿ ಅವರು ವಂದನೆ ಸಲ್ಲಿಸಿದರು.
ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಎಸ್ ಜಿ ಭಟ್ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


