Sat. Dec 27th, 2025

ಬೆಳ್ತಂಗಡಿ: ಶ್ರೀ ಸಂತಾನ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾಮಹೋತ್ಸವ ಸಂಪನ್ನ

ಬೆಳ್ತಂಗಡಿ: ಶ್ರೀ ಸಂತಾನ ಗೋಪಾಲಕೃಷ್ಣ ದೇವರ ವಾರ್ಷಿಕ ಜಾತ್ರಾಮಹೋತ್ಸವ ದಿ.26-12-2025 ರಂದು ಮಡಂತ್ಯಾರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ದಿನದ ಆರಂಭದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ಗೊನೆ ಮುಹೂರ್ತಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಸ್ವಸ್ತಿ ಪುಣ್ಯಾಹವಾಚನ, ಶ್ರೀ ಗಣಪತಿ ಹವನ, ಪಂಚವಿಂಶತಿ ಕಳಶ ಪೂಜೆ ಮತ್ತು ಸಹಸ್ರನಾಮಾರ್ಚನೆ ಸಹಿತ ಹಾಲು ಪಾಯಸ ಸೇವೆಯು ಭಕ್ತಿಯ ಪರಾಕಾಷ್ಠೆ ಮೆರೆಯಿತು.

ನಾಗತಂಬಿಲ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕದ ಜೊತೆಗೆ ಗಣಪತಿ, ದುರ್ಗೆ ಹಾಗೂ ಪವಮಾನ ಕಲಶಾಭಿಷೇಕಗಳು ಸಂಪನ್ನಗೊಂಡವು. ಮಧ್ಯಾಹ್ನ ದೈವಗಳ ಕಲಶಾಭಿಷೇಕ ಮತ್ತು ಪಂಚಪರ್ವ ಸೇವೆ ನಡೆದ ನಂತರ, ಸರಿಯಾಗಿ 12:00 ಗಂಟೆಗೆ ಮಹಾಪೂಜೆ ನೆರವೇರಿತು. ಬಳಿಕ ನೆರೆದಿದ್ದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿತರಣೆ ಮಾಡಲಾಯಿತು.

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ಮಕ್ಕಳ ಕುಣಿತ ಭಜನಾ ತಂಡ ಹಾಗೂ ಮಲ್ಲಿಪ್ಪಾಡಿ ಶ್ರೀ ಸದಾಶಿವರೇಶ್ವರ ಭಜನಾ ತಂಡದವರಿಂದ ನಡೆದ ಅದ್ಭುತ ಭಜನಾ ಕಾರ್ಯಕ್ರಮವು ನೆರೆದಿದ್ದವರ ಮನಸೂರೆಗೊಂಡಿತು.

ರಾತ್ರಿ ವೇಳೆ ಸೇವಾಕರ್ತರಿಂದ ಶ್ರೀ ದೇವರಿಗೆ ಮಹಾ ರಂಗಪೂಜೆ ನೆರವೇರಿತು. ದೈವಗಳಿಗೆ ಪರ್ವ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಜಾತ್ರೋತ್ಸವದ ಪ್ರಮುಖ ಆಕರ್ಷಣೆಯಾದ ದೇವರ ಬಲಿ ಉತ್ಸವ, ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ಸೇವೆಗಳು ಭಕ್ತಿಪೂರ್ವಕವಾಗಿ ಜರುಗಿದವು. ಅಂತಿಮವಾಗಿ ರಾಜಾಂಗಣದಲ್ಲಿ ಪ್ರಸಾದ ವಿತರಣೆಯೊಂದಿಗೆ ಈ ವರ್ಷದ ಜಾತ್ರೋತ್ಸವಕ್ಕೆ ತೆರೆ ಬಿತ್ತು.

ಗೌರವಾಧ್ಯಕ್ಷರಾದ ಯೋಗೇಶ್ ಕುಮಾರ್ ಕೆ.ಎಸ್, ಅನುವಂಶಿಕ ಆಡಳಿತ ಮೋಕ್ತೆಸರರಾದ ಸುಬ್ರಹ್ಮಣ್ಯ ನೂರಿತ್ತಾಯ, ಅರ್ಚಕರಾದ ರಂಗನಾಥ ನೂರಿತ್ತಾಯ, ರತ್ನಾಕರ ನೂರಿತ್ತಾಯ, ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಪದ್ಮ ನಾಯ್ಕ ಖಂಡಿಗ, ಕಾರ್ಯದರ್ಶಿ ಮೋಹನ್ ಪೂಜಾರಿ ಅಶ್ವಥ ಪಳಿಕೆ, ಕೋಶಾಧಿಕಾರಿ ಸೌಮ್ಯ ಮೋಹನ್ ಬಂಗೇರ, ಹಾಗೂ ಜಾತ್ರೋತ್ಸವ ಸಮಿತಿಯ ಮಾಜಿ ಅಧ್ಯಕ್ಷರುಗಳು ,ಪದಾಧಿಕಾರಿಗಳು, ಸೇವಾ ಸಮಿತಿ ಸಮಿತಿಯ ಸರ್ವ ಸದಸ್ಯರು ಊರಿನ ಭಗವದ್ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *