Sat. Apr 19th, 2025

Bengaluru: ಬಿಎಸ್‌ವೈ ಬಂಧನ ತಡೆ ಆದೇಶ ಒಂದು ವಾರ ವಿಸ್ತರಣೆ

ಬೆಂಗಳೂರು: (ಜು.27) ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸಿಐಡಿಯ ಎಸ್‌ಐಟಿಗೆ ಸೂಚಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ಒಂದು ವಾರ ವಿಸ್ತರಿಸಿದೆ.

ಇದನ್ನೂ ಓದಿ: https://uplustv.com/2024/07/27/ramanagara-ರಾಮನಗರದಲ್ಲಿ-ಶಿಕ್ಷಕರ-ಅಮಾನುಷ-ಕೃತ್ಯ-ವಿದ್ಯಾರ್ಥಿನಿಯರ

ಪ್ರಕರಣ ಕುರಿತ ಎಫ್‌ಐಆರ್‌ ರದ್ದುಪಡಿಸಬೇಕು ಮತ್ತು ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ಆರೋಪಿಯಾಗಿರುವ ಬಿ.ಎಸ್‌. ಯಡಿಯೂರಪ್ಪ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.

ಸೋಮವಾರದಿಂದ ಈ ಅರ್ಜಿಗಳು ಬೇರೊಂದು ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗುತ್ತಿರುವ ಹಿನ್ನೆಲೆಯಲ್ಲಿ (ರೋಸ್ಟರ್‌ ಬದಲಾವಣೆ) ವಿಚಾರಣೆಯನ್ನು ನ್ಯಾಯಪೀಠವು ಒಂದು ವಾರ ಕಾಲ ಮುಂದೂಡಿತು.

ಅಲ್ಲಿಯವರೆಗೆ ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಸಿಐಡಿಯ ಎಸ್‌ಐಟಿಗೆ ಸೂಚಿಸಿ ಮತ್ತು ಅಧೀನ ನ್ಯಾಯಾಲಯದ ವಿಚಾರಣೆಗೆ ಯಡಿಯೂರಪ್ಪ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇಲೆ ಯಡಿಯೂರಪ್ಪ ವಿರುದ್ಧ 2024ರ ಮಾ.14ರಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012 ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಸರ್ಕಾರವು ತನಿಖೆಯನ್ನು ಸಿಐಡಿಯ ಎಸ್‌ಐಟಿಗೆ ವರ್ಗಾಯಿಸಿತ್ತು. ಪೋಕ್ಸೋ ವಿಶೇಷ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಪ್ರಕರಣ ಕುರಿತ ಎಫ್‌ಐಆರ್‌ ರದ್ದುಪಡಿಸಲು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *