ಛತ್ತೀಸ್‌ಗಢ:(ಜು.29) ಹೊಟ್ಟೆ ಹಸಿವನ್ನು ತಾಳಲಾರದೆ ಯುವಕನೊಬ್ಬ ರೈಲ್ವೆ ಕ್ಯಾಂಟೀನ್ ಒಂದರಲ್ಲಿ ಬಿಸ್ಕೆಟ್ ಕದ್ದು ತಿಂದಿದ್ದಾನೆ. ಈತ ಒಂದು ಸಣ್ಣ ಬಿಸ್ಕೆಟ್ ಪ್ಯಾಕೆಟ್ ಕದ್ದನೆಂದು ಕ್ಯಾಂಟೀನ್ ನೌಕರರು ಯುವಕನಿಗೆ ಮನ ಬಂದಂತೆ ಥಳಿಸಿ,
ನಂತರ ಆತನ ಕಾಲಿಗೆ ಹಗ್ಗ ಕಟ್ಟಿ ಎಳೆದೊಯ್ದು ಅಮಾನವೀಯ ವರ್ತನೆ ತೋರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕ್ಯಾಂಟೀನ್ ನೌಕರರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಅಮಾನವೀಯ ಘಟನೆ ಛತ್ತೀಸ್‌ಗಢದ ರಾಯ್‌ಪುರದ ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದು, ರೈಲ್ವೆ ಕ್ಯಾಂಟೀನ್‌ನಲ್ಲಿ ಬಿಸ್ಕೆಟ್ ಕದ್ದನೆಂಬ ಆರೋಪದ ಮೇಲೆ ಯುವಕನಿಗೆ ಕ್ಯಾಂಟೀನ್ ನೌಕರರು ಮನಬಂದಂತೆ ಥಳಿಸಿದ್ದಾರೆ.
ಮಯಾಂಕ್ ತಿವಾರಿ ಎಂಬ ಯುವಕ ಹಸಿವು ನೀಗಿಸಲು ಕ್ಯಾಂಟೀನ್ ಒಂದರಲ್ಲಿ ಬಿಸ್ಕೆಟ್ ಕದಿಯಲು ಯತ್ನಿಸುತ್ತಿದ್ದಾಗ ಕ್ಯಾಂಟೀನ್ ಮಾಲೀಕನ ಕೈಗೆ ಸಿಕ್ಕಿಬೀಳುತ್ತಾನೆ. ಇದರಿಂದ ಕೋಪಗೊಂಡ ಮಾಲೀಕ ತನ್ನ ನೌಕರರ ಜೊತೆ ಸೇರಿ ಆ ಯುವಕನಿಗೆ ಮನಬಂದಂತೆ ಥಳಿಸಿದ್ದು ಮಾತ್ರವಲ್ಲದೆ, ಆತನ ಕಾಲಿಗೆ ಬಟ್ಟೆ ಕಟ್ಟಿ ಎಳೆದೊಯ್ದಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ಯಾಂಟೀನ್ ಮಾಲೀಕ ಅಂಕಿತ್ ಮಿಶ್ರಾ, ನೌಕರರಾದ ಅಶುತೋಷ್ ಶುಕ್ಲಾ, ಸುನಿಲ್ ಶುಕ್ಲಾ ಮತ್ತು ಬಸಂತ್ ಪ್ರಧಾನ್‌ನನ್ನು ಬಂಧಿಸಲಾಗಿದೆ. ಮತ್ತು ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವಾಗ ಈ ಘಟನೆಯನ್ನು ನೋಡಿಯೂ ನಿರ್ಲಕ್ಷ್ಯ ವಹಿಸಿದ ಆರ್‌ಪಿಎಫ್ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಪ್ರಿಯಾ ಸಿಂಗ್ ಎಂಬವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ರೈಲ್ವೆ ಕ್ಯಾಂಟೀನ್ ಒಂದರಲ್ಲಿ ಬಿಸ್ಕೆಟ್ ಕದ್ದ ಯುವಕನನ್ನು ಮಾಲೀಕರು ಅಮಾನುಷವಾಗಿ ಥಳಿಸಿ ಆತನ ಕಾಲಿಗೆ ಬಟ್ಟೆ ಕಟ್ಟಿ ಎಳೆದೊಯ್ಯುವ ಮೂಲಕ ಅಮಾನವೀಯವಾಗಿ ವರ್ತಿಸಿದ ದೃಶ್ಯವನ್ನು ಕಾಣಬಹುದು.