ವಯನಾಡ್:(ಜು.30) ಕೇರಳದ ವಯನಾಡ್ ನಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 19ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿರುವ ಬಗ್ಗೆ ವರದಿ ತಿಳಿಸಿದೆ.
ಇದನ್ನೂ ಓದಿ: https://uplustv.com/2024/07/30/kundapur-ಸ್ವಿಫ್ಟ್-ಮತ್ತು-ಇನೋವಾ-ಕಾರಿನಲ್ಲಿ-ಬಂದ-ಅಪರಿಚಿತ-ತಂಡ-ಸಿಸಿಟಿವಿಯ
ಸುಮಾರು 400 ಕುಟುಂಬಗಳು ಅತಂತ್ರವಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಸಂಭವಿಸಿದ ಗುಡ್ಡ ದುರಂತದಲ್ಲಿ ಇನ್ನೂ ಮೃತ ದೇಹಗಳೇ ಪತ್ತೆ ಆಗಿಲ್ಲ, ಈ ಘಟನೆ ಮಾಸೋ ಮುನ್ನವೇ ಮತ್ತೊಂದು ಭೀಕರ ದುರಂತ ನಡೆದಿದೆ.
ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ನಿಯಂತ್ರಣ ಕೊಠಡಿಯನ್ನು ತೆರೆದಿದೆ ಜೊತೆಗೆ ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ನ್ನು ಬಿಡುಗಡೆ ಮಾಡಲಾಗಿದೆ. ಹೆಲಿಕಾಪ್ಟರ್‌ಗಳನ್ನು ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೊಂದರೆಗೀಡಾಗಿರುವ ಪ್ರದೇಶಗಳಿಗೆ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಕೋಪ ಪರಿಹಾರ ಸ್ಪಂದನೆ ಪಡೆ (ಎನ್ ಡಿಆರ್ ಎಫ್) ತಂಡಗಳನ್ನು ನಿಯೋಜಿಸಲಾಗಿದ್ದು,
ಹೆಚ್ಚುವರಿ ಎನ್ ಡಿಆರ್ ಎಫ್ ಎಫ್ ತಂಡವನ್ನೂ ಕಳುಹಿಸಿಕೊಡಲಾಗುತ್ತಿದೆ ಎಂದು ಕೇರಳ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರ ಹೇಳಿದೆ.
ಪರಿಹಾರ ಕಾರ್ಯಾಚರಣೆಗೆ ನೆರವಾಗುವಂತೆ ಕಣ್ಣೂರು ಡಿಫೆನ್ಸ್ ಸೆಕ್ಯುರಿಟಿ ಕಾಪ್ಸ್ ನ ಎರಡು ತಂಡಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸ್ಥಳೀಯರ ವರದಿಗಳ ಪ್ರಕಾರ ಹಲವು ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ.
ಭಾರೀ ಮಳೆಯಾಗುತ್ತಿರುವುದು ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಕೆಎಸ್ ಡಿಎಂಎ ವಿವರಿಸಿದೆ.