Bangla Violence:(ಆ.6) ದೇಶಾದ್ಯಂತ ಹಿಂಸಾಚಾರ, ಘರ್ಷಣೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ರಾಜಧಾನಿ ಢಾಕಾವನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿದ್ದಾರೆ.
ಇದನ್ನೂ ಓದಿ: 🛑ಉಡುಪಿ: ನಿಂತಿದ್ದ ಬಸ್ ಗೆ ಸ್ಕೂಟರ್ ಡಿಕ್ಕಿ
ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಧಾನಿಯವರ ಅರಮನೆಯನ್ನು ನುಗ್ಗಲು ಯತ್ನಿಸಿದ್ದರು. ಢಾಕಾದಲ್ಲಿ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸೈನಿಕರು ಮತ್ತು ಪೊಲೀಸರು ಪ್ರಧಾನಿ ಕಚೇರಿ ಹಾಗೂ ನಿವಾಸಕ್ಕೆ ಮುಳ್ಳುತಂತಿಯ ಬೇಲಿಗಳ ಮೂಲಕ ಬಂದೋಬಸ್ತ್ ಮಾಡಿದರಾದರೂ, ಅಪಾರ ಜನಸಮೂಹದ ಮುಂದೆ ಅವರು ನಿಸ್ಸಹಾಯಕರಾದರು. ಬೀದಿಗಳಲ್ಲಿ ಹರಿದುಬಂದ ಪ್ರತಿಭಟನಾಕಾರರ ಪ್ರವಾಹ ಅಡೆತಡೆಗಳನ್ನು ಕಿತ್ತುಹಾಕಿತು. ಸ್ಥಳೀಯ ಮಾಧ್ಯಮಗಳ ಪ್ರಕಾರ ಅಂದಾಜು 4,00,000 ಪ್ರತಿಭಟನಾಕಾರರು ಬೀದಿಗಳಲ್ಲಿದ್ದಾರೆ. ಭೀಕರ ಘರ್ಷಣೆಗಳಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹಾಗಿದ್ರೆ ಇದೆಲ್ಲದಕ್ಕೂ ಕಾರಣವೇನು? ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದೇಕೆ? ಇಲ್ಲಿದೆ ನೋಡಿ ಎಲ್ಲಾ ಮಾಹಿತಿ.
1) ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂದರೆ 1971ರಲ್ಲಿ ಹೋರಾಡಿದ ಫಲಾನುಭವಿಗಳ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಯ ಬಗ್ಗೆ ಅವರ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳ ನಂತರ ಶೇಖ್ ಹಸೀನಾ ಅವರು ಪ್ರಧಾನ ಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಯಿತು ಎಂದು ಖಾಸಗಿ ಜಮುನಾ ದೂರದರ್ಶನ ಸುದ್ದಿ ವಾಹಿನಿ ವರದಿ ಮಾಡಿದೆ.
2) 1971ರ ವಿಮೋಚನಾ ಯುದ್ಧದ ನಂತರ, ಬಾಂಗ್ಲಾದೇಶವು ಪಾಕಿಸ್ತಾನದಿಂದ ದೇಶವನ್ನು ಮುಕ್ತಗೊಳಿಸುವ ಚಳವಳಿಯಲ್ಲಿ ಭಾಗವಹಿಸಿದವರ ವಂಶಸ್ಥರಿಗೆ ನಾಗರಿಕ ಸೇವೆ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ 30 ಶೇಕಡಾ ಕೋಟಾವನ್ನು ನೀಡಿದೆ. ಶೇಖ್ ಹಸೀನಾ ಅವರ ತಂದೆ, 1972 ರಲ್ಲಿ ಕೋಟಾ ವ್ಯವಸ್ಥೆಯನ್ನು ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರು ಪರಿಚಯಿಸಿದರು. ಆದಾಗ್ಯೂ, 2018ರ ಅಕ್ಟೋಬರ್‌ನಲ್ಲಿ, ವಿದ್ಯಾರ್ಥಿಗಳ ದೊಡ್ಡ ಪ್ರಮಾಣದ ಪ್ರತಿಭಟನೆಗಳ ನಡುವೆ ಎಲ್ಲ ಮೀಸಲಾತಿಗಳನ್ನು ರದ್ದುಗೊಳಿಸಲು ಶೇಖ್ ಹಸೀನಾ ಒಪ್ಪಿಕೊಂಡಿದ್ದರು.
3) ಈ ವರ್ಷ ಜೂನ್‌ನಲ್ಲಿ, 1971 ರ ನಿವೃತ್ತ ಯೋಧರ ಸಂಬಂಧಿಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶೇಖ್ ಹಸೀನಾ ಸರ್ಕಾರದ ಆ ನಿರ್ಧಾರವನ್ನು ರದ್ದುಗೊಳಿಸಿತು. ಮೀಸಲಾತಿಯನ್ನು ಮರುಸ್ಥಾಪಿಸಿತು. ಈ ತೀರ್ಪಿನ ನಂತರ, ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮತ್ತು ಮೊಮ್ಮಕ್ಕಳು ಮತ್ತು ಮಹಿಳೆಯರು ಮತ್ತು ‘ಹಿಂದುಳಿದ ಜಿಲ್ಲೆಗಳ’ ಜನರು ಸೇರಿದಂತೆ ನಿರ್ದಿಷ್ಟ ಗುಂಪುಗಳಿಗೆ 56 ಪ್ರತಿಶತ ಸರ್ಕಾರಿ ಉದ್ಯೋಗ ಮೀಸಲಾತಿ ಮರಳಿ ಸಿಕ್ಕಿದೆ.
4) ಈ ವಿದ್ಯಮಾನವು ಇತ್ತೀಚಿನ ಭಾರಿ ಪ್ರಮಾಣದ ಪ್ರತಿಭಟನೆಗಳಿಗೆ ಕಾರಣವಾಯಿತು. ಸ್ವಾತಂತ್ರ್ಯ ಹೋರಾಟಗಾರರ ಮೂರನೇ ತಲೆಮಾರಿನವರಿಗೆ ಯಾಕೆ ಈ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಶ್ನೆ. ಈ ನಡುವೆ ಕಳೆದ ತಿಂಗಳು ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ಸರ್ಕಾರಿ ಉದ್ಯೋಗದ ಅರ್ಜಿದಾರರಿಗೆ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ಹಿಂತೆಗೆದುಕೊಂಡಿತು. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, 93 ಪ್ರತಿಶತದಷ್ಟು ಸರ್ಕಾರಿ ಉದ್ಯೋಗಗಳನ್ನು ಅರ್ಹತೆ ಆಧಾರಿತ ವ್ಯವಸ್ಥೆಯಲ್ಲಿ ನಿಯೋಜಿಸಲು ಆದೇಶಿಸಿತು. ಉಳಿದ 7 ಪ್ರತಿಶತವನ್ನು ಇತರ ವರ್ಗಗಳ ನಡುವೆ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಕರಿಗೂ ನೀಡುವಂತೆ ಸೂಚಿಸಿತು.
5) ಇಷ್ಟಾಗುತ್ತಲೇ, ಸರ್ಕಾರ ವಿರುದ್ಧವೇ ಸಾಮೂಹಿಕ ಪ್ರತಿಭಟನೆಗಳು ಶುರುವಾದವು. ಇವುಗಳ ಜೊತೆಗೆ ವಿದ್ಯಾರ್ಥಿ ಸಂಘಟನೆಗಳು ಅಸಹಕಾರ ಚಳವಳಿ ಶುರುಮಾಡಿದವು. ತೆರಿಗೆ, ಕರೆಂಟ್ ಬಿಲ್ ಸೇರಿ ಯಾವುದನ್ನೂ ಪಾವತಿಸದಂತೆ ಸಾರ್ವಜನಿಕರಿಗೆ ಕರೆ ನೀಡಿದವು. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವುದಕ್ಕೂ ಕರೆ ನೀಡಿದ್ದವು. ಇದರ ಪರಿಣಾಮ ಸರ್ಕಾರದ ಕೆಲಸ ಸ್ಥಗಿತವಾಗಿಯಿತು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಹಸೀನಾ ಅಗರ್ತಲಾಕ್ಕೆ ಬಂದಿದ್ದೇಕೆ?
ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಸೇನೆಯ ಹೆಲಿಕಾಪ್ಟರ್‌ನಲ್ಲಿ ಶೇಖ್ ಹಸೀನಾ ಭಾರತದ ಅಗರ್ತಲಾಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಸೇನೆಯ ಹೆಲಿಕಾಪ್ಟರ್‌ನಲ್ಲಿ ಶೇಖ್ ಹಸೀನಾ ಪಲಾಯನ ಮಾಡಿದ ವಿಡಿಯೊ ವೈರಲ್ ಆಗಿದೆ. ಭಾರತವು ಬಾಂಗ್ಲಾದೇಶಕ್ಕೆ ಮಿತ್ರರಾಷ್ಟ್ರವಾಗಿದ್ದು, ನರೇಂದ್ರ ಮೋದಿ ಅವರಿಗೆ ಶೇಖ್ ಹಸೀನಾ ಆಪ್ತರಾಗಿದ್ದಾರೆ. ಪ್ರಾಣಭಯದ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಬಂದು ಆಶ್ರಯ ಪಡೆದಿರಬಹುದು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಭಾರತದ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಸಂಖ್ಯೆಯನ್ನು ಜಾಸ್ತಿಗೊಳಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮಧ್ಯಂತರ ಮಿಲಿಟರಿ ಆಡಳಿತ; ಮುಂದೇನಾಗುತ್ತದೆ?
ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಪಲಾಯನಗೈದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮಧ್ಯಂತರ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ದೇಶದ ಆಡಳಿತ ಈಗ ಸೇನೆಯ ವ್ಯಾಪ್ತಿಗೆ ಬಂದಿದೆ. ಸೇನೆಯೇ ಆಡಳಿತ ನಡೆಸುವುದರಿಂದ ಬಾಂಗ್ಲಾದೇಶದಲ್ಲಿ ಕಠಿಣ ನಿಯಮಗಳು ಜಾರಿಯಾಗಿ, ಜನ ಇನ್ನಷ್ಟು ದಂಗೆಯೇಳಬಹುದು. ಮೀಸಲಾತಿ ರದ್ದಾಗುವವರೆಗೂ ಬಾಂಗ್ಲಾದೇಶದಲ್ಲಿ ಅರಾಜಕತೆ ಮುಂದುವರಿಯಬಹುದು. ಇಲ್ಲವೇ, ಪ್ರತಿಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ಮುಂದಾಗಬಹುದು.