ಕೊಪ್ಪಳ (ಆ.12) : ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಇರೋ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದೆ. ಇದರಿಂದ ನೀರು ಪೋಲಾಗುತ್ತಿದೆ. ಇದರ ನಡುವೆ ಇಂದು ಕೂಡ ಜಲಾಶಯದಿಂದ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕ್ರಸ್ಟ್ ಗೇಟ್ ರಿಪೇರಿ ಮಾಡಲು ಡ್ಯಾಂ ನಲ್ಲಿನ ನೀರನ್ನು ಹಂತಹಂತವಾಗಿ ಖಾಲಿ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ.

ಇದನ್ನೂ ಓದಿ: 🐍ಇಳಂತಿಲ: 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ
ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಡಂಗುರ ಸಾರಿ ಎಚ್ಚರಿಕೆ ನೀಡಿದೆ ಹಾಗೂ ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಟಿಬಿ ಬೋರ್ಡ್ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ಸಮೀಪಕ್ಕೆ ಮಕ್ಕಳನ್ನು, ಜಾನುವಾರುಗಳು ಹೋಗದಂತೆ ಎಚ್ಚರವಹಿಸಿದೆ. ಟಿಬಿ ಡ್ಯಾಮ್ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಯಾರೂ ಕೂಡ ನದಿ ಪಾತ್ರಕ್ಕೆ ಹೋಗದಂತೆ ಟಿಬಿ ಡ್ಯಾಮ್ ಕೆಳಭಾಗದ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಕಾರಟಗಿ ತಾಲೂಕಿನ ಗ್ರಾಮಗಳಲ್ಲಿ ಡಂಗುರ ಸಾರಿ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ನಿನ್ನೆಯಿಂದ ಈವರಗೆ 13 ಟಿಎಂಸಿ ನೀರು ಡ್ಯಾಂ ನಿಂದ ಖಾಲಿ ಮಾಡಲಾಗಿದೆ.


ಡ್ಯಾಂ ಸುತ್ತಮುತ್ತ ಜನ ಸಂಚಾರ ನಿಷೇಧ:
ತುಂಗಭದ್ರಾ ಡ್ಯಾಂ ಸುತ್ತಮುತ್ತಲಿನ ಪ್ರದೇಶಕ್ಕೆ ಜನ ಸಂಚಾರ ನಿಷೇಧ ಮಾಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಆದೇಶ ಹೊರಡಿಸಿದ್ದಾರೆ. ತುಂಗಭದ್ರಾ ಸೇತುವೆ ನೋಡಲು ಅಪಾರ ಪ್ರಮಾಣದ ಪ್ರವಾಸಿಗರು ಹಾಗೂ ಜನ ಬರುತ್ತಾರೆ. ಸೇತುವೆ ಮೇಲೆ ನಿಂತು ಹುಚ್ಚಾಟ ಮೆರೆಯುತ್ತಾರೆ. ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡುವ ಹಿನ್ನಲೆ ಡ್ಯಾಂ ಸುತ್ತಮುತ್ತ ಜನ ಸಂಚಾರ ನಿಷೇಧ ಹೇರಲಾಗಿದೆ.