Sat. Apr 19th, 2025

Bengaluru: ಮಹಿಳಾ ಕಾಂಗ್ರೆಸ್ ಗೆ ಹೊಸ ಸಾರಥಿ – ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೌಮ್ಯಾ ರೆಡ್ಡಿ ನೇಮಕ

ಬೆಂಗಳೂರು:(ಆ.14) ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾರೆಡ್ಡಿ ಅವರನ್ನು ಹೈಕಮಾಂಡ್‌ ನೇಮಕ ಮಾಡಿದೆ.

ಇದನ್ನೂ ಓದಿ: 🔶ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಕ್ಯಾ.ಬ್ರಿಜೇಶ್ ಚೌಟ

ಪುಷ್ಪಾ ಅಮರನಾಥ್‌ ಇದುವರೆಗೆ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದರು. ಅವರ ಸ್ಥಾನಕ್ಕೆ ಈಗ ಸರ್ಕಾರದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಅವರನ್ನು ನೇಮಕ ಮಾಡಿರುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕರ್ನಾಟಕದ ಜೊತೆಗೆ ಅರುಣಾಚಲ ಪ್ರದೇಶ ಮತ್ತು ಚಂಡಿಗರ್‌ ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಗಳಿಗೂ ನೇಮಕ ಮಾಡಲಾಗಿದೆ.

ಸೌಮ್ಯಾ ರೆಡ್ಡಿ ಅವರು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು. ನಂತರ 2023ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು.

2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. ರಾಜಕೀಯ ಕ್ಷೇತ್ರ ಪ್ರವೇಶಕ್ಕೂ ಮುನ್ನ ಅವರು ಪ್ರಾಣಿ ದಯಾ ಸಂಘದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು.

ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ಜೊತೆಗೆ ಕಮಲಾಕ್ಷಿ ರಾಜಣ್ಣ, ನೆಟಲ್ಡಾ ಡಿಸೋಜಾ, ಕೃಪಾ ಆಳ್ವಾ, ಐಶ್ವರ್ಯ ಮಹದೇವ್‌ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಅವರಿಗೆ ಅದೃಷ್ಟ ಒಲಿದಿದೆ.

Leave a Reply

Your email address will not be published. Required fields are marked *