ಬೆಂಗಳೂರು (ಜು.9) : ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ DC ಮತ್ತು CEO ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು DC-SP-CEO ಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರದ ಕಾಳಜಿಗಳು ಜನರಿಗೆ ತಲುಪಲು ಸಾಧ್ಯ ಎಂದರು.
ರಾಜ್ಯದಲ್ಲಿ ಡೆಂಗ್ಯು ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಿ. DC, DHO ಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ಷಿಪ್ರವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಇಷ್ಟು ದಿನ ಉದಾಸೀನ, ನಿರ್ಲಕ್ಷ್ಯಕ್ಕೆ, ಕರ್ತವ್ಯಲೋಪಕ್ಕೆ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವತ್ತಿನಿಂದ ಹಿರಿಯ ಅಧಿಕಾರಿಗಳನ್ನೂ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ:
DC-CEO ಗಳು, ತಮ್ಮ ಜಿಲ್ಲೆಯ ಸಮಗ್ರ ಮಾಹಿತಿಗಳನ್ನು ಅಂಗೈಯಲ್ಲಿ ಇಟ್ಟುಕೊಂಡು ಉತ್ಸಾಹದಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರಗತಿ ಮತ್ತು ಅಭಿವೃದ್ಧಿಯ ವೇಗ ಕಾಣಲು ಸಾಧ್ಯ
ರಾಜಕಾರಣಿಗಳು, ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕಿತ್ತು. 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದು ಬಹಳ ಬೇಸರದ ಸಂಗತಿ
ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಪರಸ್ಪರ ಪೂರಕ. ಒಂದು ಇಲ್ಲದಿದ್ದರೆ ಮತ್ತೊಂದು ಇರಲು ಸಾಧ್ಯವಿಲ್ಲ
ಕರ್ನಾಟಕ ಗುಡ್ ಗೌರ್ನೆನ್ಸ್ ನಲ್ಲಿ ಮಾದರಿ ರಾಜ್ಯವಾಗಿದೆ ಎನ್ನುವುದನ್ನು ಮರೆಯಬಾರದು. ಈ ಹೆಗ್ಗಳಿಕೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮಗಳ ಮೇಲಿದೆ
ಜಿಲ್ಲಾಧಿಕಾರಿಗಳು ಯಾವುದೇ ಜಿಲ್ಲೆಗೆ ಹೋಗುವ ಮೊದಲು ಆಯಾ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳ ಜೊತೆಗೆ ಜಿಲ್ಲೆಯ ಸಮಗ್ರ ಮಾಹಿತಿ ತಿಳಿದುಕೊಳ್ಳಬೇಕು.
SSLC ಫಲಿತಾಂಶದಲ್ಲಿ ಕೆಲವು ಜಿಲ್ಲೆಗಳಲ್ಲಿ ಕುಸಿತ ಕಂಡಿರುವುದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಈ ಬಾರಿ ಕಾಪಿಯನ್ನು ಸಂಪೂರ್ಣ ನಿಲ್ಲಿಸಿದ್ದು ಶ್ಲಾಘನೀಯ. ಆದರೆ ಈ ಕಾರಣಕ್ಕೆ ಫಲಿತಾಂಶ ಕುಸಿತ ಆಯಿತು ಎನ್ನುವ ಸಮರ್ಥನೆ ಸರಿಯಲ್ಲ
*DC, CEO, ಇಲಾಖಾ ಕಾರ್ಯದರ್ಶಿಗಳ ಜವಾಬ್ದಾರಿ ಇಲ್ಲವಾ ? ಆತ್ಮಾವಲೋಕನ ಮಾಡಿಕೊಂಡು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸಲೇಬೇಕು.
DDPI, DC, CEO ಗಳು ಒಟ್ಟಿಗೇ ಕುಳಿತು ಚರ್ಚಿಸಿ ಪರಿಸ್ಥಿತಿ ಸುಧಾರಿಸಬೇಕು ಎನ್ನುವ ಸೂಚನೆ ನೀಡಿದರು
ಜನಸಂಪರ್ಕ, ಜನಸ್ಪಂದನ ಸಭೆಗಳಲ್ಲಿ 15-20 ಸಾವಿರ ಅರ್ಜಿಗಳು ಬರುತ್ತವೆ. ನೀವು ಸರಿಯಾಗಿ ಸ್ಥಳೀಯವಾಗಿ ಕೆಲಸ ಮಾಡಿದ್ದರೆ ಇಷ್ಟೊಂದು ಮಂದಿ ನನ್ನ ಬಳಿಗೆ ಏಕೆ ಬರುತ್ತಾರೆ ಎಂದು ಪ್ರಶ್ನಿಸಿ, DC, CEO ಗಳು ಇರೋದು ಜನಸಂಪರ್ಕ ಸಭೆಗಳಿಗೆ ಬಂದ ಅರ್ಜಿಗಳನ್ನು Forward ಮಾಡಿ ಮುಚ್ಚಳಿಕೆ ಕೊಟ್ಟು ಕೈತೊಳೆದುಕೊಳ್ಳೋಕಾ ಇರೋದು ? ಪರಿಹಾರ ಕೊಡಿಸುವವರು ಯಾರು? ಇದಕ್ಕೇನಾ ನೀವು ಇರೋದು ಎಂದು ಖಾರವಾಗಿ ಪ್ರಶ್ನಿಸಿದರು. ನೀವು ಪರಿಹಾರ ಕೊಡಲಿಲ್ಲ ಅಂತ ನನ್ನ ತನಕ ಬಂದಿದ್ದಾರೆ. ಜನರ ಸಮಸ್ಯೆಗಳ ಅರ್ಜಿಗಳು ಸಕಾರಾತ್ಮಕವಾಗಿ ವಿಲೇವಾರಿ ಆಗಿಲ್ಲ, ಗುಣಾತ್ಮಕವಾಗಿ ವಿಲೇವಾರಿ ಆಗಿಲ್ಲ ಅಂದರೆ ನಿಮ್ಮ ವಿರುದ್ಧ ಕ್ರಮ ಖಚಿತ ಎಂದು ಎಚ್ಚರಿಸಿದರು
ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಸಮೇತ ಜಿಲ್ಲಾ , ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರನ್ನು ನೇರ ಭೇಟಿ ಮಾಡುತ್ತಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕಡೆಯೇ ಉಳಿಯಬೇಕು ಎನ್ನುವ ನನ್ನ ಸೂಚನೆ ಸರಿಯಾಗಿ ಪಾಲನೆ ಆಗುತ್ತಿಲ್ಲ. PDO ಗಳು, VA ಗಳು ಕೆಲಸ ಮಾಡುವ ಜಾಗದಲ್ಲೇ ಉಳಿಯಬೇಕು. ಈ ಬಗ್ಗೆ DC, CEO ಗಳು ಗಮನ ಹರಿಸಬೇಕು
ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಬೇಕು, ಕುರಿ-ಮೇಕೆಗಳ ಟೆಂಟ್ ಹಾಕಿರುವ ಸ್ಥಳಕ್ಕೇ ಹೋಗಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು, ಸಂಚಾರಿ ಕುರಿಗಾಹಿಗಳಿಗೆ ಬಂದೂಕು ಲೈಸೆನ್ಸ್ ಕೊಡುವುದು ಕಡ್ಡಾಯ. ಕುರಿ ಕಳ್ಳತನ ತಡೆಯಲು ಇದು ಅಗತ್ಯ ಎನ್ನುವ ಸ್ಪಷ್ಟ ಸೂಚನೆಗಳನ್ನು ನೀಡಿದರು
ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತಿದೆ. ಇದನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು. ಪ್ರತೀ ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು
ಈ ಎಲ್ಲಾ ಕೆಲಸಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎನ್ನುವ ಸೂಚನೆ ನೀಡಿದರು
ತಹಶೀಲ್ದಾರ್ ನ್ಯಾಯಾಲಯಗಳಲ್ಲಿ 8234 ಪ್ರಕರಣಗಳು ಬಾಕಿ ಇವೆ. ಉಪವಿಭಾಹಾಧಿಕಾರಿಗಳ ಬಳಿ RRT (ಹಕ್ಕು ಬದಲಾವಣೆ) ಪ್ರಕರಣಗಳು 37587 ಬಾಕಿ ಇವೆ. ಇವುಗಳಲ್ಲಿ 5 ವರ್ಷಕ್ಕೂ ಮೇಲ್ಪಟ್ಟವು 7522 ಪ್ರಕರಣಗಳಿವೆ, DC ಗಳ ಬಳಿ 10838 ಪ್ರಕರಣಗಳು ಬಾಕಿ ಇವೆ. 5 ವರ್ಷಕ್ಕೂ ಮೇಲ್ಪಟ್ಟವು 4207 ಪ್ರಕರಣಗಳಿವೆ. DC ಗಳೇ ಬಾಕಿ ಉಳಿಸಿಕೊಂಡರೆ ನೀವು AC ಮತ್ತು ತಹಶೀಲ್ದಾರ್ ಗಳಿಗೆ ಏನು ಸೂಚನೆ ಕೊಡ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು
ಕೆಲವು DC ಗಳ ಬಳಿ ಒಂದೂ ಪ್ರಕರಣಗಳೂ ಬಾಕಿ ಇಲ್ಲ. ಉಳಿದ DC ಗಳಿಂದ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು
ಜನ DC, AC ತಹಶೀಲ್ದಾರ್ ಕಚೇರಿಗಳಿಗೆ ಅಲೆಯೋದು ಅಧಿಕಾರಿಗಳು ಜನರ ಕೈಗೆ ಸಿಗದೇ ಇದ್ದರೆ ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದರು