Wed. Nov 20th, 2024

Kapu: “ತಹಶೀಲ್ದಾರ್ ಕಚೇರಿಯಲ್ಲಿ ನುಲಿಯ ಚಂದಯ್ಯನವರ ದಿನಾಚರಣೆ “

ಕಾಪು:(ಆ.19) ನುಲಿಯ ಚಂದಯ್ಯನವರಂತೆ ಕಾಯಕ ನಿಷ್ಠೆ ಬೆಳೆಸಿಕೊಂಡು ಅವರು ಹೊಸೆದ ಅರಿವಿನ ಹಗ್ಗವನ್ನು ಮಾದರಿಯಾಗಿಸಿಕೊಂಡು ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಪ್ರತಿಭಾ ಆರ್ ಕರೆ ನೀಡಿದರು.

ಇದನ್ನೂ ಓದಿ: 🛑Bengaluru: ಡ್ರಾಪ್ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನ- ತಮಿಳುನಾಡು ಮೂಲದ ಆರೋಪಿ ಅರೆಸ್ಟ್!

ಇಂದು ತಹಶೀಲ್ದಾರ್ ಕಚೇರಿಯಲ್ಲಿ ನಡೆದ ನುಲಿಯ ಚಂದಯ್ಯನವರ ಜಯಂತಿಯಲ್ಲಿ ಭಾಗವಹಿಸಿದ ಪ್ರತಿಭಾ ರವರು ನುಲಿಯ ಚಂದಯ್ಯನವರ ಜನ್ಮ ವೃತ್ತಾಂತ ಮತ್ತು ಅವರ ವಚನ ಶ್ರೇಷ್ಠತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.

12 ನೇ ಶತಮಾನದ ಬಸವಣ್ಣ ಮುಂತಾದವರ ವಚನದ ಕಟ್ಟುಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ:
ಸಮಗಾರ ಹರಳಯ್ಯನ ಮಗ ಶೀಲವಂತ ಮತ್ತು ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯಳ ಅಂತರ್ಜಾತಿ ವಿವಾಹದ ನಂತರ ಕಲ್ಯಾಣದಲ್ಲಿ ಸನಾತನಿಗಳು ದೊಡ್ಡ ಗಲಭೆ ಎಬ್ಬಿಸುತ್ತಾರೆ. ಪರಿಣಾಮವಾಗಿ, ಬಸವಣ್ಣ ಗಡಿಪಾರಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ಕೂಡಲಸಂಗಮದತ್ತ ತೆರಳಿ ಕೊನೆಯುಸಿರೆಳೆಯುತ್ತಾನೆ. ಶರಣರ ಕಗ್ಗೊಲೆಗಳು ನಡೆಯುತ್ತವೆ. ಉಳಿದ ಶರಣರು ವಚನದ ಕಟ್ಟುಗಳ ಜತೆ ಉಳವಿಯ ಕಡೆ ಧಾವಿಸುತ್ತಾರೆ. ಉಳವಿಯಲ್ಲಿ ಚನ್ನಬಸವಣ್ಣ ಉಸಿರೆಳೆದ ನಂತರ ನುಲಿಯ ಚಂದಯ್ಯ, ಅಕ್ಕ ನಾಗಮ್ಮ, ಹಿಪ್ಪರಗಿ ಮಲ್ಲಿಕಾರ್ಜುನ, ರುದ್ರಮುನಿ ಅವರಂತಹ ಶರಣರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಗೋಣಿಬೀಡಿಗೆ ಬರುತ್ತಾರೆ. ಹೀಗೆ ಕಲ್ಯಾಣದ ಹತ್ಯಾಕಾಂಡದ ನಂತರ ವಚನದ ಕಟ್ಟುಗಳ ರಕ್ಷಣೆಯಲ್ಲಿ ಚಂದಯ್ಯನ ಪಾತ್ರ ಇರುವುದು ಗಮನಾರ್ಹ.

ಚಂದಯ್ಯ ‘ಚಂದೇಶ್ವರ ಲಿಂಗ’ ಎನ್ನುವ ಅಂಕಿತದಲ್ಲಿ ರಚಿಸಿದ 49 ವಚನಗಳು ಲಭ್ಯವಾಗಿವೆ. ಈ ಎಲ್ಲಾ ವಚನಗಳಲ್ಲಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಬೇರೆ ಬೇರೆ ನೆಲೆಗಳಲ್ಲಿ ಎದುರುಗೊಳ್ಳಲಾಗಿದೆ. ನಿಜದ ಭಕ್ತಿಯ ಬಗ್ಗೆ, ಕಾಯಕ ಶುದ್ಧಿಯ ಬಗ್ಗೆ ಚಂದಯ್ಯ ಮತ್ತೆ ಮತ್ತೆ ಮಾತನಾಡುತ್ತಾನೆ. ಅಪ್ರಾಮಾಣಿಕತೆ, ಆಡಂಬರದ ಭಕ್ತಿ, ನಡೆ ನುಡಿಯಲ್ಲಿನ ವ್ಯತ್ಯಾಸದ ಬಗ್ಗೆ ಕಟುವಾಗಿ ಟೀಕಿಸಿದ್ದಾನೆ. ಸಹ ವಚನಕಾರರು ಚಂದಯ್ಯನ ಬಗ್ಗೆ ವಚನ ಕಟ್ಟಿದ್ದಾರೆ. ಮುಂದೆ ಜನಪದ ಸಮುದಾಯಗಳು ಚಂದಯ್ಯನ ಬಗ್ಗೆ ಪದ ಕಟ್ಟಿ ಹಾಡುವ ಮೂಲಕ ಆತನನ್ನು ಉಳಿಸಿಕೊಂಡಿವೆ.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಗಳಾದ ಅಶೋಕ್ ಕೋಟೆಕಾರ್, ದೇವಕಿ, ರವಿಕಿರಣ್ ಹಾಗೂ ಖಜಾನಾಧಿಕಾರಿ ವಿಜಯಲಕ್ಷ್ಮಿ, ಸಿಬ್ಬಂದಿಗಳಾದ ಸತೀಶ್ ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *