ಹುಬ್ಬಳ್ಳಿ:(ಆ.23) ತನ್ನ ಪ್ರೀತಿಯನ್ನು ನಿರಾಕರಿಸಿದರೆ ನೇಹಾ ಹಿರೇಮಠ ಕೊಲೆಯಾದಂತೆ ನಿನ್ನನ್ನು ಕೊಲೆ ಮಾಡ್ತೀನಿ ಎಂದು ಯುವಕನೋರ್ವ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಅಬ್ಬಾಸ್ ಎಂಬಾತನನ್ನು ಬಂಧನ ಮಾಡಿದ್ದಾರೆ, ಅಲ್ಲದೇ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: 🏐ಉಜಿರೆ : ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟ
ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಬಾಸ್ ವಿರುದ್ದ ಅಪ್ರಾಪ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ. ಇನ್ನು ಆರೋಪಿ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೂಡ ಕೇಳಿ ಬಂದಿದೆ.
ಬಾಲಕಿ ಶಾಲೆಗೆ ಹೋಗುವಾಗ ಆಕೆಯೊಂದಿಗೆ ಆರೋಪಿ ಅಬ್ಬಾಸ್ ಸ್ನೇಹ ಹೆಸರಿನಲ್ಲಿ ಹತ್ತಿರ ಆಗಿದ್ದಾನೆ. ಶಾಲೆಯಿಂದ ಮನೆಗೆ ಬಿಡೋದಾಗಿ ಕೆಲ ಬಾರಿ ಗಾರ್ಡನ್ ಗೆ ಕರೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಇದೇ ರೀತಿ ಜೂನ್ 22 ರಂದು ರೇವಡಿಹಾಳ ಬ್ರಿಡ್ಜ್ ಹತ್ತಿರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಆಕೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ.
ಇದಾದ ಬಳಿಕ ಆಗಸ್ಟ್ 18ರಂದು ಬಾಲಕಿ ಮನೆ ಬಳಿ ಬಂದು ಅಬ್ಬಾಸ್ ಗಲಾಟೆ ಮಾಡಿದ್ದನಂತೆ. ಅಲ್ಲದೇ ಅಪ್ರಾಪ್ತ ಬಾಲಕಿಯನ್ನು ಎಳೆದಾಡಿದ್ದಾನೆ. ಆಕೆಯ ರಕ್ಷಣೆಗೆ ಬಂದ ಪೋಷಕರಿಗೆ, ನಾನು ನಿಮ್ಮ ಮಗಳನ್ನು ಪ್ರೀತಿ ಮಾಡುತ್ತಿದ್ದೇನೆ. ನಿರಾಕರಣೆ ಮಾಡಿದರೆ ನೇಹಾ ಹಿರೇಮಠಳಂತೆ ಕೊಲೆ ಮಾಡೋದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದನಂತೆ.
ಸದ್ಯ ಬಾಲಕಿ ಪೋಷಕರು ಆರೋಪಿ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ದೂರಿನ ಅನ್ವಯ ಆರೋಪಿಯನ್ನು ಬಂಧಿಸಿದ್ದಾರೆ.