Wed. Nov 20th, 2024

Belal Murder Case- ಬೆಳಾಲು ನಿವೃತ್ತ ಶಿಕ್ಷಕ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಅಳಿಯ ಮತ್ತು ಮೊಮ್ಮಗನ ಬಂಧನ

ಬೆಳ್ತಂಗಡಿ:(ಆ.24) ಬೆಳಾಲು ಗ್ರಾಮದ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ತನಿಖೆಯಲ್ಲಿ ಇಬ್ಬರನ್ನು ಬಂಧನ ಮಾಡಿದ್ದು, ಮಗಳಿಗೆ ಆಸ್ತಿ ಮತ್ತು ಜಾಗದಲ್ಲಿ ಪಾಲು ಕೊಡದ ಕಾರಣ ಅಳಿಯ, ಮತ್ತು ಮೊಮ್ಮಗ ಸೇರಿ ಭೀಕರವಾಗಿ ಹತ್ಯೆ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.ಬಾಲಕೃಷ್ಣ ಭಟ್‌ ಬಡೆಕ್ಕಿಲ್ಲಾಯ ಅವರ ಮಗಳ ಗಂಡನಾದ ರಾಘವೇಂದ್ರ ಕೆದಿಲಾಯ (53) ಮತ್ತು ಮೊಮ್ಮಗ ಮುರಳಿಕೃಷ್ಣ (20) ಬಂಧಿತ ಆರೋಪಿಗಳು. ಆ.24 ರಂದು ಕಾಸರಗೋಡು ಮನೆಯಿಂದ ಪೊಲೀಸರು ಇವರಿಬ್ಬರ ಬಂಧನ ಮಾಡಿದ್ದು, ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆಸ್ತಿ, ಚಿನ್ನಾಭರಣಕ್ಕೆ ಕೊಲೆ ನಡೆದಿರುವುದು ತಿಳಿದು ಬಂದಿದೆ. ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ. ಸಿಸಿ ಕ್ಯಾಮೆರಾ, ಟೆಕ್ನಿಕಲ್‌ ಆಧಾರದಲ್ಲಿ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಲಾಗಿದ್ದು, ಇವರಿಬ್ಬರ ಬಂಧನ ಮಾಡಲಾಗಿದೆ.

ಹತ್ಯೆಯಾದ ಬಾಲಕೃಷ್ಣ ಭಟ್‌ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತ ಹೊಂದಿದ್ದ ಇವರ ಪತ್ನಿ ನಿವೃತ್ತ ಶಿಕ್ಷಕಿ ದಿ.ಯು. ಲೀಲಾ (75) ಇವರ ಚಿನ್ನವನ್ನು ಮಗಳಿಗೆ ನೀಡದೆ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಈ ಕಾರಣದಿಂದ ಅಳಿಯ ಹಾಗೂ ಮೊಮ್ಮಗ ಸಂಚು ರೂಪಿಸಿ ಹತ್ಯೆ ಮಾಡುವ ಯೋಜನೆ ರೂಪಿಸಿದ್ದರು.

ಕಾಸರಗೋಡಿನಿಂದಲೇ ಇವರಿಬ್ಬರು ಮಾರಕಾಸ್ತ್ರ ಸಹಿತ ಸ್ಕೂಟರ್‌ನಲ್ಲಿ ರಾಘವೇಂದ್ರ ಕೆದಿಲಾಯ, ಸ್ನೇಹಿತನ ಬೈಕ್‌ನಲ್ಲಿ ಮುರಳಿಕೃಷ್ಣ ಮಂಗಳೂರಿಗೆ ಬಂದಿದ್ದಾರೆ. ನಂತರ ಅಲ್ಲಿ ಬೈಕ್‌ ನಿಲ್ಲಿಸಿ ಒಂದೇ ಸ್ಕೂಟರಿನಲ್ಲಿ ಅಪ್ಪ-ಮಗ ಬೆಳಾಲಿಗೆ ಬಂದಿದ್ದು, ಬಾಲಕೃಷ್ಣ ಬಡೆಕ್ಕಿಲ್ಲಾಯರ ಮನೆಗೆ ಬಂದ ಇವರು ಬಾಳೆಎಲೆಯಲ್ಲಿ ಊಟ ಮಾಡಿ ಚಾ ಕುಡಿದು ನಂತರ ತಮ್ಮ ಯೋಜನೆಯಂತೆ ಮೊಮ್ಮಗ ಮಾರಕಾಸ್ತ್ರದಿಂದ ಕುತ್ತಿಗೆಗೆ ಕಡಿದಿದ್ದು, ಈ ವೇಳೆ ಜೀವ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಓಡಿ ಬಂದ ಬಾಲಕೃಷ್ಣ ಬಡೆಕ್ಕಿಲ್ಲಾಯರು ಬಂದಾಗ ಮತ್ತೆ ದಾಳಿ ಮಾಡಿದ್ದಾರೆ.

ನಂತರ ನಳ್ಳಿ ನೀರಿನ ಕೆಳಗೆ ಹಾಕಿದ್ದ ಹಾಸು ಕಲ್ಲು ತಲೆಯ ಮೇಲೆ ಇಟ್ಟು ಅಲ್ಲಿಂದ ಅಳಿಯ-ಮೊಮ್ಮಗ ಸ್ಕೂಟರ್‌ನಲ್ಲಿ ಕಾಸರಗೋಡಿನ ತಮ್ಮ ಮನೆಗೆ ಸೇರಿದ್ದಾರೆ. ಆದರೆ ಈ ಕೊಲೆ ಮಾಡಿದ ವಿಷಯ ವಿಜಯಲಕ್ಷ್ಮೀ ಅವರಿಗೆ ತಿಳಿದಿರಲಿಲ್ಲ.ಕಾಸರಗೋಡು ಮನೆಗೆ ಯಾವಾಗ ಧರ್ಮಸ್ಥಳ ಪೊಲೀಸರು ಬಂದು ಇವರಿಬ್ಬರನ್ನು ವಶಕ್ಕೆ ಪಡೆದರೋ ಆವಾಗಲೇ ವಿಷಯ ತಿಳಿದಿದೆ ಎಂದು ವರದಿಯಾಗಿದೆ.

ಬಾಲಕೃಷ್ಣ ಭಟ್‌ ಅವರ ಕಿರಿಯ ಮಗ ಸುರೇಶ್‌ ಭಟ್‌ ಅವರನ್ನು ಕೂಡಾ ಕೊಲೆ ಮಾಡಲು ಇವರಿಬ್ಬರು ತಯಾರಿ ಮಾಡಿಕೊಂಡು ಬಂದಿದ್ದರು. ಆದರೆ ಎಷ್ಟೇ ಹೊತ್ತು ಕಾದರೂ ಬರದ ಕಾರಣ ಬಾಲಕೃಷ್ಣ ಭಟ್‌ ಅವರ 50 ಸಾವಿರದ ಎರಡು ಬಾಂಡ್‌ ಪೇಪರ್‌ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಆರೋಪಿಗಳು ಪಡೆದುಕೊಂಡು ಹೋಗಿದ್ದರು.

ಆರೋಪಿಗಳ ಸುಳಿವು ವಾಸನೆ ಹಿಡಿದ ಮಂಗಳೂರು ಶ್ವಾನ ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆ ಹೋಗಿ ಮಹತ್ವದ ಸುಳಿವು ನೀಡಿತ್ತು. ಇದು ಕುಟುಂಬದವರೇ ಮಾಡಿದ ಕೃತ್ಯ ಎಂದು ಈ ಮೂಲಕ ತಿಳಿದು ಬಂದಿದೆ. ನಂತರ ತನಿಖೆ ಮುಂದುವರಿಸಿದಾಗ ಕುಟುಂಬದ ಎಲ್ಲ ಸದಸ್ಯರ ಮೊಬೈಲ್‌ ನಂಬರ್‌ ಪಡೆದು ಕಾರ್ಯಚರಣೆ ಮಾಡಿದಾಗ ಅಳಿಯ ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.

ಅಂತೂ ಭಾರೀ ಕುತೂಹಲ ಕೆರಳಿಸಿದ್ದ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಕಂಡು ಹಿಡಿಯುವುದರಲ್ಲಿ ಪೊಲೀಸರು ಮಹತ್ವದ ಕೆಲಸ ಮಾಡಿದ್ದಾರೆ. ಇಂದು ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಆರೋಪಿಗಳಿಬ್ಬರನ್ನು ಹಾಜರುಪಡಿಸಿದ್ದು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *