ಬೆಂಗಳೂರು :(ಸೆ.6) ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಚಾಲಕ ಕೋಪಗೊಂಡು ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದೆ. ಈ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: 🟠ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಯುವತಿ ಹಾಗೂ ಆಕೆಯ ಸ್ನೇಹಿತ ಇಬ್ಬರೂ ಓಲಾ ಆಟೋವನ್ನು ಬುಕ್ ಮಾಡಿದ್ದರು. ಸಕಾಲಕ್ಕೆ ಆಟೋ ಬಾರದ ಹಿನ್ನೆಲೆ ಮತ್ತೊಂದು ಆಟೋವನ್ನು ಬುಕ್ ಮಾಡಿದ್ದಳು. ಬಳಿಕ ಮುಂಚಿತವಾಗಿ ಬಂದ ಆಟೋವನ್ನು ಹತ್ತಿ, ಈ ಹಿಂದೆ ಬುಕ್ ಮಾಡಿದ್ದ ಆಟೋವನ್ನು ರದ್ದು ಮಾಡಿದ್ದಳು.
ಆಟೋ ಚಾಲಕನ ಕರೆಯಿಸಿ ವಿಚಾರಣೆ:
ಇದನ್ನು ಗಮನಿಸಿದ ಆಟೋ ಚಾಲಕ ಯುವತಿಯನ್ನ ಹಿಂಬಾಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಇನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವೀಡಿಯೋವನ್ನು ಮಾಡಿಕೊಂಡಿದ್ದ ಯುವತಿ, ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲಿಸಿದ ಪೊಲೀಸರು, ಆಟೋ ಚಾಲಕ ಮುತ್ತುರಾಜ್ ಎಂಬಾತನನ್ನ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಯುವತಿಗೂ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷಿತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಆಟೋ ಚಾಲಕನೊಬ್ಬ ಯುವತಿಯನ್ನ ಅವಾಚ್ಯವಾಗಿ ನಿಂದಿಸಿರುವುದನ್ನು ಒಪ್ಪುವಂತದಲ್ಲ. ಇಂತಹ ಕೆಲ ಆಟೋ ಚಾಲಕರು ಎಲ್ಲರಿಗೂ ಕೆಟ್ಟ ಹೆಸರು ತರುತ್ತಾರೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.