Ganesha Chaturthi 2024 :(ಸೆ.7) ಗಣಪತಿ ದೇವರು ಅಂದ್ರೆ ಎಲ್ಲರಿಗೂ ಪಂಚಪ್ರಾಣ. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವವನು ಗಣಪ. ಗಣೇಶ ಚತುರ್ಥಿಯಂದು ಗಣಪನನ್ನು ನೋಡುವುದೇ ವಿಶೇಷ. ವಿದ್ಯೆ, ಬುದ್ಧಿ, ಸಂಪತ್ತಿನ ಅಧಿದೇವತೆ ಈ ವಿನಾಯಕ. ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಎಲ್ಲ ಹಿಂದೂಗಳ ಅಚ್ಚುಮೆಚ್ಚಿನ ದೇವರು.
ದೇಶದಾದ್ಯಂತ ಸರ್ವ ವಿಘ್ನ ನಿವಾರಕ ಗಣೇಶನ ಅನೇಕ ದೇವಾಲಯಗಳನ್ನು ಕಾಣಬಹುದು.
ಈ ಭಾರತದಲ್ಲಿ ಹಲವಾರು ಪುರಾತನ ಹಾಗೂ ಇಷ್ಟಾರ್ಥಗಳನ್ನು ಸಿದ್ಧಿಸುವ ಗಣೇಶನ ದೇವಾಲಯಗಳಿವೆ. ಗಣೇಶ ಚತುರ್ಥಿಯಂದು ವಿನಾಯಕ ದೇವಸ್ಥಾನಕ್ಕೆ ತೆರಳುವವರು ಹೆಚ್ಚಿನವರಾಗಿರುತ್ತಾರೆ. ಆದರೆ ಇಲ್ಲೊಂದು ದೇವಾಲಯದಲ್ಲಿ ತಲೆಯಿಲ್ಲದ ಗಣೇಶನ ವಿಗ್ರಹವನ್ನು ಪೂಜಿಸುವುದು ವಿಶೇಷ.
ಪುರಾಣದಲ್ಲಿ ಶಿವ ದೇವರು ಕೋಪದಲ್ಲಿ ಗಣೇಶನ ತಲೆಯನ್ನು ಕತ್ತರಿಸಿ ಆನೆಯ ತಲೆಯನ್ನು ಜೋಡಿಸಿದ ಕಥೆಯನ್ನು ನೀವು ಕೇಳಿದ್ದಿರಬಹುದು. ಆದರೆ ಶಿವನು ಗಣಪತಿಗೆ ತಲೆಯನ್ನು ಜೋಡಿಸಿದ್ದು ಈ ದೇವಸ್ಥಾನವಿರುವ ದೇವಭೂಮಿಯಲ್ಲಿಯೇ ಎನ್ನಲಾಗಿದೆ.
ಈ ಮುಂಡಿಕಾಟೀಯ ದೇವಾಲಯವು ಕೇದರ ಕಣಿವೆಯಲ್ಲಿದೆ. ಇಲ್ಲಿ ತಲೆಯಿಲ್ಲದ ಗಣಪತಿಯನ್ನು ಆರಾಧನೆ ಮಾಡಲಾಗುತ್ತದೆ. ಈ ಕೇದರ ಕಣಿವೆಯೂ ಉತ್ತರಕಾಂಡ ರಾಜ್ಯದ ಸೋನ್ಪ್ರಯಾಗ್ನಿಂದ 3 ಕಿಮೀ ದೂರದಲ್ಲಿದೆ.
ಈ ಪ್ರದೇಶವನ್ನು ದೇವಭೂಮಿ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಶಿವ ಗಣಪತಿಯ ತಲೆ ತೆಗೆದು, ಇಲ್ಲಿಯೇ ಗಣೇಶನಿಗೆ ಆನೆ ತಲೆಯನ್ನು ಜೋಡಿಸಿದ ಎಂಬ ಪುರಾಣವಿದೆ. ಹೀಗಾಗಿ ಈ ಪ್ರದೇಶಕ್ಕೆ ಮುಂಡಿಕಾಟೀಯ ಎನ್ನುವ ಹೆಸರು ಬಂದಿತು ಎನ್ನಲಾಗಿದೆ.