Wed. Nov 20th, 2024

Darshan Bhaskar: ಗಾಯನದ ಜೊತೆಗೆ ಮೂಲ ಕಸುಬು ದೈವದ ಸೇವೆಯನ್ನು ಮರೆಯದ ಯುವಕ

ಪುತ್ತೂರು:(ಸೆ.15) ವರ್ಣ ವ್ಯವಸ್ಥೆಯ ಮೂಲಕ ಸಾಗಿಬಂದ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಜಾತಿಗೂ ಅದರದೇ ಆದ ಕುಲ ಕಸುಬು ಒಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ತಮ್ಮ ಕುಲ ಕಸುಬನ್ನು ಪಕ್ಕಕ್ಕಿಟ್ಟು ತಮ್ಮ ಜೀವನಕ್ಕೆ ದಾರಿಯಾಗುವ ಉದ್ಯೋಗದ ಹಿಂದೆ ಓಡುತ್ತಿದ್ದಾರೆ.

ಇದನ್ನೂ ಓದಿ: ⛔ಆಟೋಗೆ ಕಾರು ಗುದ್ದಿ ಆಟೋ ಪಲ್ಟಿ

ಇಂದಿನ ಸೂಪರ್ ಫಾಸ್ಟ್ ಯುಗದಲ್ಲಿ ಹಿಂದೆನ ಕುಲ ಕಸುಬನ್ನು ನಂಬಿಕೊಂಡು ನಿಂತಲ್ಲಿ ಜೀವನದಲ್ಲಿ ಯಶಸ್ಸು ಸಾಶ್ಯವಿಲ್ಲ ಎನ್ನುವ ಮನಸ್ಥಿತಿ ಯುವ ಪೀಳಿಗೆಯಲ್ಲಿ ಹೆಚ್ಚಾದ ಹಿನ್ನಲೆಯಲ್ಲಿ ತಮ್ಮ ಮೂಲ ಕಸುಬನ್ನು ಮರೆತು ಬಿಡುತ್ತಿದ್ದಾರೆ‌.

ಈ ಕಾರಣಕ್ಕಾಗಿಯೇ ಇಂದು ಹಲವು ಕೆಲಸಗಳನ್ನು ನಿರ್ವಹಿಸಲು ಇಂದು ಯಂತ್ರ ಅಥವಾ ಇತರ ವ್ಯವಸ್ಥೆಯ ಮೊರೆ ಹೋಗಲಾಗುತ್ತಿದೆ. ಆದರೆ ಇಲ್ಲೊಬ್ಬ ಯುವಕ ತನ್ನ ಮೂಲ ಕಸುಬಿನ ಜೊತೆಗೆ ತನಗೆ ಇಷ್ಟವಾಗುವ ಉದ್ಯೋಗ ಮಾಡುತ್ತಾ ನೆಮ್ಮದಿಯಾಗಿದ್ದಾನೆ.

ಇದು ಕೇರಳದ ಕಾಸರಗೋಡು ಜಿಲ್ಲೆಯ‌ ಮಂಜೇಶ್ವರ ನಿವಾಸಿ ದರ್ಶನ್ ಭಾಸ್ಕರ ಎನ್ನುವ ಯುವಕನ ಕಥೆ. ಕೇರಳ ಹಾಗು ತುಳುನಾಡಿನಲ್ಲಿ ಆಚರಣೆಯಲ್ಲಿರುವ ದೈವಾರಾಧನೆಯಲ್ಲಿ ದೈವಗಳ ನರ್ತನ ಮಾಡುವ ಸಮುದಾಯದಿಂದ ಬಂದಿರುವ ಈ ಯುವಕ ತನ್ನ ಜೀವನದಲ್ಲಿ ಡಬಲ್ ರೋಲ್ ಮಾಡುತ್ತಾರೆ.

ದೈವಾರಾಧನೆಯ ಸೀಸನ್‌ ನಲ್ಲಿ ಈತ ಅಪ್ಪಟ ದೈವ ನರ್ತಕ, ಉಳಿದ ಸಮಯದಲ್ಲಿ ಈತ ಓರ್ವ ಪ್ರತಿಭಾನ್ವಿತ ಗಾಯಕ.

ಕೇರಳ ಭಾಗದಲ್ಲಿ ಹೆಚ್ಚಾಗಿರುವ ಮತ್ತು ಅತ್ಯಂತ ಶಕ್ತಿಶಾಲಿ ದೈವವಾದ ಭಗವತಿ ದೈವವನ್ನು ಕಟ್ಟುವ ದರ್ಶನ್ ಭಾಸ್ಕರ್ ಆ ಮೂಲಕವೂ ಕೇರಳ ಹಾಗು ತುಳುನಾಡಿನಲ್ಲಿ ಖ್ಯಾತರಾದವರು.

ಫೂಮುಡಿ ಎಂದು ಕರೆಯುವ ಈ ದೇವಿಯ ಸ್ವರೂಪವಾದ ಈ ದೈವದ ಬಣ್ಣ ಹಾಗೂ ವೇಷಭೂಷಣಗಳೇ ಅದ್ಭುತ. ಸುಮಾರು 10 ಮೀಟರ್ ಗೂ ಮಿಕ್ಕಿದ ಗೋಪುರಾಕಾರದ ಹೂವಿನಿಂದ ಅಲಂಕರಿಸಿದ ಮುಡಿ (ಬಿದಿರಿನಿಂದ ತಯಾರಿಸಿದ ಅಣಿ ) ಯನ್ನು ಹೊತ್ತು ಸಾಗುವ ಈ ಪ್ರಮುಖ ದೈವದ ನರ್ತಕ ದರ್ಶನ್ ಭಾಸ್ಕರ್.

ದೈವಗಳ ಆರಾಧನೆ ನಡೆಯುವ ಸುಮಾರು 6 ತಿಂಗಳ ಕಾಲ ಅಪ್ಪಣ, ಸಂಪ್ರದಾಯಬದ್ಧ ದೈವ ನರ್ತಕನಾಗಿ ಬದಲಾಗುವ ದರ್ಶನ್ ಭಾಸ್ಕರ್ ದೈವಗಳ ಆರಾಧನೆಯ ಸೀಸನ್ ಮುಗಿದ ಬಳಿಕ ಗಾಯಕನಾಗಿ ಮಿಂಚುತ್ತಾರೆ. ಕೆ.ಜೆ.ಯೇಸುದಾಸ್ ಅವರ ಫ್ಯಾನ್ ಆಗಿರುವ ದರ್ಶನ್ ಭಾಸ್ಕರ್ ಹೆಚ್ಚಾಗಿ ಅವರದೇ ಹಾಡುಗಳನ್ನು ಅನುಕರಣೆ ಮಾಡುತ್ತಾರೆ.

ಜ್ಯೂನಿಯರ್ ಯೇಸುದಾಸ್ ಎಂದೇ ಚಿರಪರಿಚಿತರಾಗಿರುವ ದರ್ಶನ್ ಬಾಸ್ಕರ್ ಕಾಸರಗೋಡು, ಮಂಗಳೂರು ಹಾಗು ಉಡುಪಿ ಭಾಗಗಳಲ್ಲಿ ಹಲವು ವೇದಿಕೆಗಳಲ್ಲಿ ಹಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಕನ್ನಡ, ಮಲಯಾಳಂ ಹಾಡುಗಳನ್ನು ಹಾಡುವ ದರ್ಶನ್ ಭಾಸ್ಕರ್ ಗೆ ಕನ್ನಡ ಬರೆಯಲು, ಓದಲು ಬರುವುದಿಲ್ಲ. ಆದರೂ ಕನ್ನಡದ ಹಾಡುಗಳನ್ನು , ಇಂಗ್ಲಿಷ್ ಅಕ್ಷರಗಳಲ್ಲಿ ಬರೆದು ಸುಮಧುರವಾಗಿ ಹಾಡುತ್ತಾರೆ. ಮಾತೃಭಾಷೆ ಮಲಯಾಳಂ ಆದರೂ ಕನ್ನಡ ಹಾಡುಗಳನ್ನೇ ಹಾಡುವ ಇವರ ಕನ್ನಡ ಪ್ರೇಮವೂ ಶ್ಲಾಘನೀಯವಾಗಿದೆ.

Leave a Reply

Your email address will not be published. Required fields are marked *