Wed. Nov 20th, 2024

Ujire : ಉಜಿರೆ ಎಸ್. ಡಿ. ಎಂ ಕಾಲೇಜು ಎನ್ ಎಸ್ ಎಸ್ ಘಟಕಕ್ಕೆ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅ.5 ರಂದು “ಸುವರ್ಣ ಸಮ್ಮಿಲನ ” ಕಾರ್ಯಕ್ರಮ

ಉಜಿರೆ:(ಸೆ.25) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉಜಿರೆ ಕಾಲೇಜಿನ ಎನ್ ಎಸ್ ಎಸ್ ಘಟಕ 50 ವರ್ಷದ ಸಂಭ್ರಮದಲ್ಲಿದೆ.

ಇದನ್ನೂ ಓದಿ; ⭕Mangalore: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಆಂಬುಲೆನ್ಸ್ – ರೋಗಿ ಮೃತ್ಯು!

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕವು ಐವತ್ತು ವರ್ಷಗಳನ್ನು ಪೂರೈಸಿದ (ಸುವರ್ಣ ಸಂಭ್ರಮಾಚರಣೆ) ಹಿನ್ನೆಲೆಯಲ್ಲಿ ‘ಸುವರ್ಣ ಸಮ್ಮಿಲನ’ ಕಾರ್ಯಕ್ರಮವು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಅ. 5ರಂದು ನಡೆಯಲಿದೆ ಎಂದು ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ತಿಳಿಸಿದರು.

ಕಾಲೇಜಿನಲ್ಲಿ ಇಂದು (ಸೆ. 25) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 750 ಕ್ಕೂ ಅಧಿಕ ಹಿರಿಯ ಎನ್.ಎಸ್.ಎಸ್. ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಮಂಗಳೂರು ವಿ.ವಿ. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಶೇಷಪ್ಪ ಅಮೀನ್ ಹಾಗೂ ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಉಡುಪಿಯ ರವಿ ಕಟಪಾಡಿ ಹಾಗೂ ಉಜಿರೆಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಲಕ್ಷ್ಮೀ ಮೋಹನ್ ಅವರಿಗೆ ‘ಸುವರ್ಣ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರ, ರಾಜ್ಯ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯೋಜನಾಧಿಕಾರಿಗಳು ಹಾಗೂ ಸ್ವಯಂಸೇವಕರಿಗೆ ಸನ್ಮಾನ ನಡೆಯಲಿದೆ. ಸಾರ್ಥಕ 50 ವರ್ಷಗಳ ಸವಿ ನೆನಪಿಗಾಗಿ ಸಂಸ್ಥೆಯ ಮುಖ್ಯಸ್ಥರು, ಕಾರ್ಯಕ್ರಮದ ಅತಿಥಿ ಅಭ್ಯಾಗತರು, ಹಿರಿಯ ಯೋಜನಾಧಿಕಾರಿಗಳು ಹಾಗೂ ಸ್ವಯಂಸೇವಕರ ಸಂದೇಶ, ಆಹ್ವಾನಿತ ಲೇಖನ ಇತ್ಯಾದಿಗಳನ್ನೊಳಗೊಂಡ ಸ್ಮರಣ ಸಂಚಿಕೆ ‘ಸೇವಾ ಪಥ’ ಬಿಡುಗಡೆಗೊಳ್ಳಲಿದೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಒಳಾಂಗಣದಲ್ಲಿ ಸುವರ್ಣ ಸಂಭ್ರಮದ ನೆನಪಿಗಾಗಿ 50 ಗಿಡಗಳನ್ನು ನೆಡುವ ಕಾರ್ಯಕ್ರಮವು ಹಿರಿಯ ಯೋಜನಾಧಿಕಾರಿಗಳು ಮತ್ತು ಸ್ವಯಂಸೇವಕರಿಂದ ನಡೆಯಲಿದೆ ಎಂದು ಅವರು ವಿವರಿಸಿದರು.

ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ, ಹಿರಿಯ ಸ್ವಯಂಸೇವಕರೊಂದಿಗೆ ಸಂವಾದ ಕಾರ್ಯಕ್ರಮ, ಕಾಲೇಜಿನ ಕಲಾವೈಭವ ತಂಡ ಹಾಗೂ ಹಿರಿಯ ಮತ್ತು ಕಿರಿಯ ಸ್ವಯಂಸೇವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಶಿಬಿರ ಜ್ಯೋತಿ ನಡೆಯಲಿದೆ. ಅಲ್ಲದೆ, ಎನ್.ಎಸ್.ಎಸ್. ಘಟಕಕ್ಕೆ ದೊರಕಿರುವ ಪ್ರಶಸ್ತಿ ಪುರಸ್ಕಾರಗಳು ಮತ್ತು ಪೂರಕ ಮಾಹಿತಿಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನವನ್ನು ಸಮ್ಯಗ್ದರ್ಶನ ಸಭಾಂಗಣದಲ್ಲಿ ಆಯೋಜಿಸಲಾಗುವುದು ಮತ್ತು ಎಸ್‌.ಡಿ.ಎಂ. ಎನ್.ಎಸ್.ಎಸ್. ಘಟಕ ನಡೆದು ಬಂದ 50 ವರ್ಷಗಳ ಹಾದಿಯನ್ನು ನೆನೆಯುವ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

ಸುವರ್ಣ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಗುಳಿ ಇದನ್ನು ದತ್ತು ಶಾಲೆಯಾಗಿ ತೆಗೆದುಕೊಳ್ಳುವುದು ಸಹಿತ ಹಲವು ಶಾಶ್ವತ ಯೋಜನೆಗಳನ್ನು ಅಂದು ಘೋಷಿಸಲಾಗುವುದು. ಜನವರಿ ತಿಂಗಳ ಅಂತ್ಯಕ್ಕೆ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ‘ಎನ್ನೆಸ್ಸೆಸ್ ಹಬ್ಬ’ ಆಯೋಜಿಸುವ ಉದ್ದೇಶವೂ ಇದೆ ಎಂದು ಅವರು ತಿಳಿಸಿದರು.

ಸಾರ್ಥಕ ಸುವರ್ಣ ಸಂಭ್ರಮವನ್ನು ಆಚರಿಸಿರುವ ಉಜಿರೆ ಶ್ರೀ ಧ.ಮಂ. ಕಾಲೇಜಿನ ಹೆಮ್ಮೆಯ ವಿಭಾಗಗಳಲ್ಲೊಂದಾದ ಎನ್.ಎಸ್.ಎಸ್. ಘಟಕವು 1972ರಿಂದ ಯೋಜನಾಧಿಕಾರಿ ಪ್ರೊ. ಎನ್.ಜಿ. ಪಟವರ್ಧನ್ ಅವರ ಆದಿಯಾಗಿ ಪ್ರಸಕ್ತ ಯೋಜನಾಧಿಕಾರಿಗಳನ್ನು ಒಳಗೊಂಡಂತೆ 24 ಯೋಜನಾಧಿಕಾರಿಗಳ ಮುಂದಾಳುತ್ವದಲ್ಲಿ ಇಲ್ಲಿಯವರೆಗೆ ‘ನನಗಲ್ಲ ನಿನಗೆ’ ಎಂಬ ಧ್ಯೇಯವಾಕ್ಯದೊಂದಿಗೆ 10 ಸಾವಿರಕ್ಕೂ ಅಧಿಕ ಸ್ವಯಂಸೇವಕರಿಗೆ ಸೇವೆ ಮಾಡುವ ಅವಕಾಶ ನೀಡಿದೆ. ಎನ್.ಎಸ್.ಎಸ್. ಘಟಕದ ಶಿಸ್ತು ಮತ್ತು ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ಇಂದು ಅನೇಕ ಸ್ವಯಂಸೇವಕರು ದೇಶವಿದೇಶದಲ್ಲಿ ಅತ್ಯುತ್ತಮ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈವರಗೆ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ 14 ಬಾರಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಶಸ್ತಿ, 10 ಬಾರಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ, 10 ಬಾರಿ ರಾಜ್ಯ ಶ್ರೇಷ್ಠ ಯೋಜನಾಧಿಕಾರಿ ಪ್ರಶಸ್ತಿ ಮತ್ತು 1 ರಾಷ್ಟ್ರ ಮಟ್ಟದ ಪ್ರಶಸ್ತಿ ಸಹಿತ ಒಟ್ಟು 35 ಪ್ರಶಸ್ತಿ ಲಭಿಸಿರುವುದು ಎನ್.ಎಸ್.ಎಸ್. ಘಟಕದ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದೆ. ಇಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡ ರಾಜ್ಯ ಮತ್ತು ರಾಷ್ಟ್ರದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆ ನಮ್ಮದಾಗಿದೆ” ಎಂದರು.

ಇಲ್ಲಿಯವರೆಗೂ ಪ್ರತೀ ವರ್ಷವೂ ವಾರ್ಷಿಕ ಶಿಬಿರದ ಮೂಲಕ ಸುಮಾರು 40 ಶಾಲೆಗಳಲ್ಲಿ ಕೈತೋಟ ನಿರ್ಮಾಣ, ಸ್ವಚ್ಛತಾ ಅಭಿಯಾನ, ಹಾಗೂ ಘಟಕದ ನಿರಂತರ ಚಟುವಟಿಕೆಯ ಭಾಗವಾಗಿ ಬೀದಿನಾಟಕ, ಆರೋಗ್ಯ ಶಿಬಿರ, ಜಾಗೃತಿ ಜಾಥಾಗಳಂತಹ ಸಮಾಜಮುಖಿ ಕಾರ್ಯಗಳು, ಗದ್ದೆ ನಾಟಿಯಂತಹ ಕೃಷಿ ಚಟುವಟಿಕೆಗಳೂ ನಡೆದಿವೆ. ಕೊರೋನಾ ಅವಧಿಯಲ್ಲಿ ಹಾಗೂ ನೆರೆಪೀಡಿತ ಸಂದರ್ಭದಲ್ಲಿ ಸ್ವಯಂಸೇವಕರು ವಿಶೇಷವಾಗಿ ಸೇವೆಸಲ್ಲಿಸುವ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ. ದೇಶಾದ್ಯಂತ ಪ್ರತೀವರ್ಷ ನಡೆಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಅನೇಕರು ಪಾಲ್ಗೊಂಡಿದ್ದು ದೆಹಲಿಯಲ್ಲಿ ನಡೆದ ರಾಷ್ಟ್ರಗಣರಾಜ್ಯೋತ್ಸವ ಪಥ ಸಂಚಲನ ಮತ್ತು ಕರ್ನಾಟಕದಲ್ಲಿನ ರಾಜ್ಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ನಮ್ಮ ಸ್ವಯಂಸೇವಕರು ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡುವ ಎನ್.ಎಸ್.ಎಸ್. ಘಟಕವು ಹಲವು ಸಮಾಜಮುಖಿ ಮತ್ತು ಜೀವನ ಶಿಕ್ಷಣದ ಕಲಿಕೆಗಳ ಮೂಲಕ ವಿದ್ಯಾರ್ಥಿಯ ಸರ್ವತೋಮುಖ ವಿಕಸನಕ್ಕೆ ಭದ್ರ ಬುನಾದಿಯಾಗಿದೆ” ಎಂದರು.

ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ. ದೀಪಾ ಆರ್.ಪಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *