Wed. Nov 20th, 2024

Raichur: ಮನೆ ಖಾಲಿ ಮಾಡು ಎಂದ ಮಾಲಕಿ – ಬಾಡಿಗೆದಾರ ಮಾಲಕಿಗೆ ಮಾಡಿದ್ದೇನು ಗೊತ್ತಾ?

ರಾಯಚೂರು :(ಸೆ.28) ಪ್ರತಿಯೊಬ್ಬ ಮನೆ ಮಾಲಕರೂ ಬಾಡಿಗೆಗೆ ಮನೆ ಕೊಡುವ ಮುನ್ನ ಸಾವಿರಾರು ಬಾರಿ ಯೋಚಿಸಬೇಕಾಗಿದೆ. ಬ್ಯಾಚುಲರ್ಸ್‌ಗೆ ಬಾಡಿಗೆ ಮನೆ ನೀಡುವ ಮನೆ ಮಾಲಕರೇ ಹುಷಾರ್. ಬಾಡಿಗೆ ಬಾಕಿ ಹಣ ಕೇಳಿ, ಮನೆ ಖಾಲಿ ಮಾಡು ಅಂದಿದ್ದಕ್ಕೆ ಮನೆ ಮಾಲೀಕಿಯನ್ನೇ ಕೊಂದ ಘಟನೆ ನಡೆದಿದೆ.

ಇದನ್ನೂ ಓದಿ: 🟠ಉಜಿರೆ: ಕರ್ನಾಟಕ ಸಂಭ್ರಮ 50ರ ಅಂಗವಾಗಿ ಉಜಿರೆಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ


ರಾಯಚೂರು ಜಿಲ್ಲೆಯ ಉದಯ್ ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಶಿವು ಎಂಬ ಆರೋಪಿ, ಮನೆ ಮಾಲಕಿಯನ್ನೇ ಕೊಂದು ಆಕೆಯ ಚಿನ್ನಾಭರಣ ಕದ್ದು ಆಕೆಯ ಕುಟುಂಬಸ್ಥರೊಂದಿಗೆ ಸೇರಿ ಅಂತ್ಯಸಂಸ್ಕಾರ ಮಾಡಿದ್ದಾನೆ. ಸದ್ಯ ಪಶ್ಚಿಮ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.


ಸ್ವಂತ ಮನೆಯಲ್ಲಿ ಬಾಡಿಗೆಗೆ ಕೊಟ್ಟು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಮನೆ ಮಾಲಕಿ ಶೋಭಾ ಪಾಟೀಲ್(60) ಅವರು ಆರೋಪಿ ಶಿವುಗೆ ಬಾಡಿಗೆ ಬಾಕಿ ಹಣ ಕೇಳಿ, ಮನೆ ಖಾಲಿ ಮಾಡು ಎಂದಿದ್ದರು. ಇದಕ್ಕೆ ದ್ವೇಷಕಾರಿದ್ದ ಶಿವು, ಸೆಪ್ಟೆಂಬರ್. 21ರ ರಾತ್ರಿ ಮನೆ ಮಾಲಕಿ ಮಲಗಿದ್ದ ವೇಳೆ ಮುಖಕ್ಕೆ ದಿಂಬಿನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಆಕೆಯ ಚಿನ್ನಾಭರಣ ದೋಚಿದ್ದ. ಮರುದಿನ ಸೆಪ್ಟೆಂಬರ್ 22ರ ಬೆಳಿಗ್ಗೆ ಕುಟುಂಬಸ್ಥರು ಪೋನ್ ಮಾಡಿದ್ದು ಆಕೆ ಫೋನ್ ರಿಸೀವ್ ಮಾಡದೇ ಇದ್ದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.

ಸಂಬಂಧಿಕರು ಮನೆ ಬಳಿ ಬಂದಾಗ ಆರೋಪಿ ಶಿವು ಅಮಾಯಕನಂತೆ ನಟಿಸಿದ್ದ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶೋಭಾ ಅವರದು ಸಹಜ ಸಾವೆಂದು ಮನೆಯವರೆಲ್ಲ ಶೋಭಾರ ಅಂತ್ಯಸಂಸ್ಕಾರ ಮಾಡಿದ್ದಾರೆ.


ಶೋಭಾ ರ ಅಂತ್ಯಸಂಸ್ಕಾರದ ವೇಳೆ ಆರೋಪಿ ಶಿವು ಕೂಡ ಕುಟುಂಬಸ್ಥರೊಂದಿಗೆ ಸೇರಿ ಎಲ್ಲಾ ಕಾರ್ಯಗಳಲ್ಲೂ ಸಾಥ್ ನೀಡಿದ್ದ. ಮನೆ ಸ್ವಚ್ಛಗೊಳಿಸಿ ಅನುಮಾನ ಬಾರದಂತೆ ನಟಿಸಿದ್ದ. ಅಂತ್ಯಸಂಸ್ಕಾರ ಮುಗಿದ ಬಳಿಕ ಸೆಪ್ಟೆಂಬರ್ 23ರಂದು ಮನೆ ಸ್ವಚ್ಛಗೊಳಿಸಿ, ಮೃತಳ ಚಿನ್ನಾಭರಣ ಹುಡುಕಾಟ ನಡೆಸಲಾಗಿದೆ. ಮೃತ ಶೋಭಾರ ಮೊಬೈಲ್ ಫೋನ್, ಚಿನ್ನದ ಸರ, ಓಲೆ ಕಾಣದೇ ಇದ್ದಾಗ ಕುಟುಂಬಸ್ಥರಿಗೆ ಅನುಮಾನ ಮೂಡಿದೆ.


ಬಳಿಕ ಸೆಪ್ಟೆಂಬರ್ 24ರಂದು ಕುಟುಂಬಸ್ಥರು ಮನೆ ಪಕ್ಕದ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಆಗ ಸೆಪ್ಟೆಂಬ‌ರ್21ರ ರಾತ್ರಿ ಶೋಭಾರನ್ನ ಹತ್ಯೆಗೈದಿದ್ದ ಶಿವು ಮನೆ ಒಳಗೆ, ಹೊರಗೆ ಓಡಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರ ಆಧಾರದ ಮೇಲೆ ಸೆಪ್ಟೆಂಬರ್25 ರಂದು ಕುಟುಂಬಸ್ಥರು ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ನಿನ್ನೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಕೊಲೆ ದೃಢಪಟ್ಟ ಹಿನ್ನೆಲೆ ಅಂತ್ಯಸಂಸ್ಕಾರ ಮಾಡಲಾದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

Leave a Reply

Your email address will not be published. Required fields are marked *