ಮಂಗಳೂರು :(ಅ.1) ಮರವೂರಿನ ಫಲ್ಗುಣಿ ನದಿಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃತದೇಹವು ಪತ್ತೆಯಾಗಿದೆ.
ಇದನ್ನೂ ಓದಿ: 🚲ಮಂಗಳೂರಿನಿಂದ ಕೇದಾರನಾಥ್‌ಗೆ ಸೈಕಲ್ ಏರಿ ಹೊರಟ ಯುವಕರು
ಸೆ.29ರ ಭಾನುವಾರ ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಉರ್ವಸ್ಟೋರಿನ ಅನೀಶ್ (19) ಹಾಗೂ ಕೊಟ್ಟಾರ ಚೌಕಿ ನಿವಾಸಿ ಸುಮಿತ್ (20) ಅವರ ಮೃತದೇಹವನ್ನು ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ.
ಅನೀಶ್ ಮೃತದೇಹ ಸೆ.30ರ ಸೋಮವಾರ ಬೆಳಗ್ಗೆ ಪತ್ತೆಯಾಗಿತ್ತು, ನಂತರ ಶೋಧ ಕಾರ್ಯ ಮುಂದುವರಿದು ಅ.01 ಮಂಗಳವಾರ ಬೆಳಗ್ಗೆ ಸುಮಿತ್ ಮೃತದೇಹ ಪತ್ತೆಯಾಗಿದೆ.
ಘಟನೆ:
ನಾಲ್ವರು ಸ್ನೇಹಿತರು ಸೆ.29ರ ರವಿವಾರ ಸಂಜೆ ಮರವೂರಿನ ಫಲ್ಗುಣಿ ನದಿಯಲ್ಲಿ ಈಜಾಡಲೆಂದು ಬಂದಿದ್ದರು. ಈ ಪೈಕಿ ಕೊಟ್ಟಾರ ಚೌಕಿ ನಿವಾಸಿ ಸುಮಿತ್, ಉರ್ವಸ್ಟೋರ್ ನಿವಾಸಿ ಅನೀಶ್ ನದಿಯಲ್ಲಿ ನಾಪತ್ತೆಯಾಗಿದ್ದರು. ಈ ಪೈಕಿ ಉರ್ವ ಅಂಗಡಿ ನಿವಾಸಿ ಅನೀಶ್ ಅವರ ಮೃತದೇಹ ಸೋಮವಾರ ಪತ್ತೆಯಾಗಿತ್ತು.
ಸುಮಿತ್ ರಿಗಾಗಿ ಎನ್ ಡಿ ಆರ್ ಎಫ್ ಮತ್ತು ಎಸ್ ಟಿ ಆರ್ ಎಫ್ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದರು. ಇಂದು ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನದಿಯಲ್ಲಿ ಈಜಲು ತೆರಳಿದ್ದ ನಾಲ್ವರ ಪೈಕಿ ಕೋಡಿಕಲ್ ನಿವಾಸಿ ಅರುಣ್ ಮತ್ತು ಕೋಡಿಕಲ್ ಮಾಳೂರು ನಿವಾಸಿ ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದರು.