Wed. Nov 20th, 2024

Subrahmanya: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪವಿತ್ರ ಭೋಜನ ಪ್ರಸಾದದಲ್ಲಿ ವಿನೂತನ ಬದಲಾವಣೆ – ಏನದು?

ಸುಬ್ರಹ್ಮಣ್ಯ:(ಅ.9) ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ ಪ್ರಸಾದವು ಪರಮ ಪಾವನವಾದುದು. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಅನ್ನದಾತ ಸುಬ್ಬಪ್ಪ ಎಂಬ ಪ್ರತೀತಿ ಪಡೆದ ಶ್ರೀ ದೇವಳದಲ್ಲಿ ಇತರ ಸೇವೆಗಳಂತೆ ಭೋಜನ ಪ್ರಸಾದ ಸ್ವೀಕಾರವು ಪವಿತ್ರವಾಗಿದೆ.

ಇಲ್ಲಿ ವಾರ್ಷಿಕವಾಗಿ ಸುಮಾರು 55ಲಕ್ಷಕ್ಕೂ ಮಿಕ್ಕಿ ಭಕ್ತರು ಭೋಜನ ಪ್ರಸಾದ ಸ್ವೀಕರಿಸುತ್ತಾರೆ. ಇದೀಗ ಶ್ರೀ ದೇವಳದ ಆಡಳಿತಾಧಿಕಾರಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ವಿಶೇಷ ಕಾಳಜಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರ ಚಿಂತನಾತ್ಮಕ ಯೋಜನೆ ಮೇರೆಗೆ ಪ್ರಸಾದ ಭೋಜನ ವ್ಯವಸ್ಥೆಯಲ್ಲಿ ವಿತರಿಸುವ ಖಾದ್ಯಗಳಲ್ಲಿ ವಿನೂತನ ಬದಲಾವಣೆಗಳನ್ನು ತರಲಾಗಿದೆ. ಇದರಿಂದಾಗಿ ಭಕ್ತರಿಗೆ ವಿಶೇಷ ಭೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.

ಇದನ್ನೂ ಓದಿ: 🛑ಮಂಗಳೂರು : ಅರುಣ್ ಉಳ್ಳಾಲ್ ರವರ ನಿವಾಸಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು.ಆದರೆ ಇದೀಗ ನೂತನ ಯೋಜನೆ ಮೂಲಕ ಪ್ರತಿದಿನ ಬೇರೆ ಬೇರೆ ರೀತಿಯ ಪಾಯಸಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಕಡ್ಲೆ ಬೇಳೆ, ಹೆಸರು ಬೇಳೆ, ಸಾಬಕ್ಕಿ, ಗೋಧಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ರವೆ ಪಾಯಸ ಮತ್ತು ಸಿರಿಧಾನ್ಯ ಸೇರಿದಂತೆ 10 ಬಗೆಯ ಪಾಯಸವನ್ನು ದಿನವಾಹಿ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ಪ್ರಸಾದ ಭೋಜನವು ಅತ್ಯಂತ ಸ್ವಾಧಿಷ್ಟ ಮತ್ತು ಪೌಷ್ಠಿಕಾಂಶಗಳಿಂದ ಕೂಡಿರಬೇಕೆಂದು ಅತ್ಯುತ್ತಮವಾದ 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಯೋಜನೆ ಮಾಡಿದ್ದಾರೆ.


ಕುಕ್ಕೆ ದೇವಳದಲ್ಲಿ ಸಂಪ್ರದಾಯ ಪ್ರಕಾರ ಬಾಳೆ ಎಲೆಯಲ್ಲಿ ಭೋಜನ ಪ್ರಸಾದ ವಿತರಣೆಯಾಗುತ್ತದೆ. ಪ್ರತಿನಿತ್ಯ ಭಕ್ತರಿಗೆ ಅನಾದಿ ಕಾಲದಿಂದ ಪ್ರಸಾದದಲ್ಲಿ ವಿತರಿಸಲಾಗುತ್ತಿರುವ ಸಾಂಪ್ರದಾಯಿಕ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಣೆಯಾಗುತ್ತದೆ. ಅಲ್ಲದೆ ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.

ಶಿಕ್ಷಣಕ್ಕಾಗಿ ಅನ್ನದಾನ:
ಶ್ರೀ ದೇವಳವು ಭಕ್ತರಿಗೆ ಸೂಕ್ತವಾದ ಅನುಕೂಲತೆಯನ್ನು ಒದಗಿಸುವುದರ ಜೊತೆಗೆ ತನ್ನ ಆಡಳಿತದಲ್ಲಿ ಎರಡು ಶಿಕ್ಷಣ ಸಂಸ್ಥೆಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಿನ ನಿತ್ಯ ಶ್ರೀ ದೇವಳದಿಂದ ಪ್ರಸಾದ ಭೋಜನ ವಿತರಣೆಯಾಗುತ್ತಿದೆ. ಅದೇ ರೀತಿ ಕ್ಷೇತ್ರದಲ್ಲಿನ ಇತರ ಶಾಲೆಗಳಿಗೆ ಕೂಡಾ ಶ್ರೀ ದೇವಳದಿಂದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.ಕ್ಷೇತ್ರದಲ್ಲಿ ವ್ಯಾಸಂಗ ಮಾಡುವ ಸುಮಾರು 3,300 ಮಂದಿಗೆ ಭೋಜನ ಪ್ರಸಾದ ನೀಡುವ ಮೂಲಕ ವಿದ್ಯಾರ್ಥಿಗಳ ಶ್ಷೆಕ್ಷಣಿಕ ಜ್ಞಾನ ಪ್ರಗತಿಗೆ ದೇವಳ ತನ್ನದೇ ಆದ ಕೊಡುಗೆ ನೀಡಿದೆ.

“ಶ್ರೀ ದೇವಳದಲ್ಲಿ ಭೋಜನವು ಕೂಡಾ ಒಂದು ಅಮೂಲ್ಯವಾದ ಪ್ರಸಾದ. ಹಿಂದಿನಿಂದಲೂ ಶ್ರೀ ದೇವರ ಅನ್ನಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನದ ಹೈಟೆಕ್ ಪಾಕಶಾಲೆ ನಿರ್ಮಾಣವಾಗಿದೆ. ಮುಂದೆ ಭಕ್ತರಿಗೆ ಶ್ರೀ ದೇವರ ಭೋಜನ ಪ್ರಸಾದ ಸ್ವೀಕರಿಸಲು ಹೆಚ್ಚಿನ ವ್ಯವಸ್ಥೆಯನ್ನು ಮಾಡಲಾಗುವುದು. ಅಲ್ಲದೆ ಭಕ್ತರಿಗೆ ಭೋಜನ ಪ್ರಸಾದ ಸ್ವೀಕಾರ ಸುಲಲಿತಗೊಳಿಸಲು ಬೇಕಾದ ಉತ್ತಮ ಯೋಜನೆ ನಡೆಸಲಾಗುವುದು. ಇದರೊಂದಿಗೆ ಭಕ್ತರಿಗೆ ಸೂಕ್ತವಾದ ಅನುಕೂಲತೆ ಒದಗಿಸುವ ಮೂಲಕ ದೇವರ ಸೇವೆಯನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ” ಎಂದು ಆಡಳಿತಾಧಿಕಾರಿಗಳು ಮತ್ತು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮಹಪಾತ್ರ ಹೇಳಿದರು.

“ ಭಕ್ತರಿಗೆ ಪೌಷ್ಟಿಕಾಂಶ ಭರಿತವಾದ ವಿಶೇಷ ಭೋಜನ ಪ್ರಸಾದ ವಿತರಿಸುವ ದೃಷ್ಠಿಯಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ.ಇದರಿಂದಾಗಿ ಭಕ್ತರು ಸ್ವಾದಿಷ್ಠವಾದ ಪ್ರಸಾದ ಸ್ವೀಕರಿಸಲು ಅನುಕೂಲತೆಯಾಗಿದೆ. ವಿವಿಧ ಬಗೆಯ ಪಾಯಸ, ವಿವಿಧ ತರಕಾರಿಗಳ ಸಾಂಬಾರನ್ನು ಇದೀಗ ತಯಾರಿಸಲಾಗುತ್ತಿದೆ. ಭೋಜನ ಪ್ರಸಾದ ವಿತರಣೆ ಮತ್ತು ತಯಾರಿಕೆಯ ವ್ಯವಸ್ಥೆಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ” ಎಂದು ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.

“ಪ್ರತಿದಿನ ಕಾಲೇಜಿಗೆ ಊಟ ಬರುತ್ತಿರುವುದರಿಂದ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಳಿಂದ ಮತ್ತು ದೂರದೂರುಗಳಿಂದ ಬರುವಂತಹ ವಿದ್ಯಾರ್ಥಿಗಳು ಬೆಳಗ್ಗೆ ಬೇಗನೆ ಬಿಟ್ಟು ಆಹಾರ ಸೇವಿಸದೆ ಬರುತ್ತಾರೆ. ಆದುದರಿಂದ ಮಧ್ಯಾಹ್ನ ಉತ್ತಮವಾದ ಭೋಜನ ಸಿಗುವ ಕಾರಣ ಮಕ್ಕಳ ಆರೋಗ್ಯ ವೃದ್ಧಿಯಾಗುತ್ತಿದೆ. ಅಷ್ಟೇ ಅಲ್ಲದೆ ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರ ದೊರಕುವುದರಿಂದ ವಿದ್ಯಾರ್ಥಿಗಳ ಬುದ್ದಿಶಕ್ತಿ ಚುರುಕುಗೊಳ್ಳುತ್ತದೆ. ಕಾಲೇಜಿಗೆ 100ಕ್ಕೆ 100 ಫಲಿತಾಂಶ ಬರುವುದರಲ್ಲಿ ಆಡಳಿತ ಮಂಡಳಿಯ ಅತ್ಯುತ್ತಮ ಸಹಾಯ, ಉಪನ್ಯಾಸಕರ ಸಂಯೋಜನೆ ಹಾಗೂ ಶ್ರೀ ದೇವಳದ ಭೋಜನ ವ್ಯವಸ್ಥೆಯು ಕಾರಣೀಭೂತವಾಗಿದೆ” ಎಂದು ಎಸ್‌ಎಸ್‌ ಪಿಯು ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಹೇಳಿದರು.

Leave a Reply

Your email address will not be published. Required fields are marked *